

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಪ್ರಶ್ನಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಜಾಲಹಳ್ಳಿ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ.
ಅ.13ರಂದು ಜಾಲಹಳ್ಳಿಯ ಎಎಸ್ಐ ಅಶ್ವಥಯ್ಯ, ಪೇದೆ ಗುರು ಜಂಬಗಿ ಮತ್ತು ಪಾಲಿಕೆ ಮಾರ್ಷಲ್ ಮುನಿರಾಜು ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಮಾಡುವರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದರು. ಗೋಕುಲ ಬ್ರಿಡ್ಜ್ ಕೆಳಗಡೆ ಹಳೆ ರೈಲ್ವೆ ಗೇಟ್ ಹತ್ತಿರ ಇರುವ ಬಾಬು ಮೋಟರ್ಸ್ ಗ್ಯಾರೇಜ್ನಲ್ಲಿ ನೌಕರ ಮಾಸ್ಕ್ ಧರಿಸದೆ ಓಡಾಡುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಹತ್ತಿರ ಹೋಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ್ದರು. ಅಷ್ಟಕ್ಕೆ ಕುಪಿತಗೊಂಡ ಕೆಲ ಕಿಡಿಗೇಡಿಗಳು ಏನು ಮಾಡಿದ್ರು ಗೊತ್ತಾ?
ಮಾಸ್ಕ್ ಧರಿಸಿ ಎಂದ ಪೊಲೀಸ ಮೇಲೆ ಕುಪಿತಗೊಂಡ ಗ್ಯಾರೇಜ್ನಲ್ಲಿದ್ದ ಶಿವಕುಮಾರ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಅದೇ ವೇಳೆ ಕಾರ್ಲ್ ಮಾರ್ಕ್ಸ್ ಎಂಬಾತ, ನಮಗೆ ಕೊರನಾ ಬಂದಿಲ್ಲ. ಅದಕ್ಕಾಗಿ ಮಾಸ್ಕ್ ಹಾಕುವುದಿಲ್ಲ ಎಂದ. ಇದನ್ನು ಪ್ರಶ್ನೆ ಮಾಡಿದ ಪೊಲೀಸರ ವಿರುದ್ಧವೇ ಗಲಾಟೆ ಮಾಡಿ ಕೈ ಮುಷ್ಠಿಯಿಂದ ಹಲ್ಲೆ ನಡೆಸುತ್ತಿದ್ದಾರೆ.
ಕೂಡಲೇ ಸ್ಥಳಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಂಡ ಪೊಲೀಸರು ಆರ್.ಟಿ. ನಗರದ ಮನೋರಾಯನಪಾಳ್ಯದ ಕಾರ್ಲ್ಮಾರ್ಕ್ಸ್(25), ಸಿಂಗಾಪುರ ಲೇಔಟ್ನ ಶಿವಕುಮಾರ್(54) ಮತ್ತು ಎಸ್. ಬಾಬು(40) ಎಂಬುವವರನ್ನು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.