

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ರಾಷ್ಟ್ರೀಯ ತನಿಖಾ ತಂಡದ(ಎನ್ಐಎ) ವಿಚಾರಣೆ ಎದುರಿಸಿದ್ದಾರೆ.
ಎನ್ಐಎ ತನಿಖಾ ಸಂಸ್ಥೆ ಅಧಿಕಾರಿಗಳು ರಿಜ್ವಾನ್ ಅರ್ಷದ್ ಹಾಗೂ ಜಮೀರ್ಗೆ ದೂರವಾಣಿ ಕರೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ದೊಮ್ಮಲೂರಿನಲ್ಲಿರುವ ಎನ್ಐಎ ಕಚೇರಿಗೆ ಅ.12ರಂದು ರಿಜ್ವಾನ್ ಅರ್ಷಾದ್ ಹಾಜರಾದರೆ, ಅ.13ರಂದು ಜಮೀರ್ ಹಾಜರಾಗಿ ಅಧಿಕಾರಿಗಳಿಗೆ ಈ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.
ಮಾಹಿತಿ ನೀಡಿದ್ದೇವೆ: ಈ ಕುರಿತು 'ವಿಜಯವಾಣಿ' ಜತೆ ಮಾತನಾಡಿದ ಶಾಸಕ ರಿಜ್ವಾನ್ ಅರ್ಷಾದ್, ಗಲಭೆ ನಡೆದಾಗ ರಾತ್ರಿ ಏನೆಲ್ಲ ನಡೆದಿದೆ ಎಂಬ ಬಗ್ಗೆ ಎನ್ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ನನಗೆ ಗೊತ್ತಿರುವ ಮಾಹಿತಿ ನೀಡಿದ್ದೇನೆ. ಜಮೀರ್ ಅವರಿಂದಲೂ ಮಾಹಿತಿ ಕಲೆ ಹಾಕಿದ್ದಾರೆ. ಮುಂದೆಯೂ ಎನ್ಐಎ ತನಿಖೆಗೆ ಸಹಕರಿಸುತ್ತೇವೆ. ಗಲಭೆ ವೇಳೆ ಕರ್ತವ್ಯದಲ್ಲಿದ್ದ ಅಧಿಕಾರಿಗಳಿಂದಲೂ ಎನ್ಐಎ ಮಾಹಿತಿ ಕಲೆ ಹಾಕುವ ಸಾಧ್ಯತೆಗಳಿವೆ ಎಂದರು.
ಗಲಭೆ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಗಲಭೆ ನಿಯಂತ್ರಿಸಲು ಸಹಕರಿಸುವಂತೆ ಕೋರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿದ್ದೆವು. ಸ್ವಲ್ಪ ಹೊತ್ತು ಗಲಭೆ ನಿಯಂತ್ರಿಸಲು ಪ್ರಯತ್ನಿಸಿದ್ದೆವು. ಅದಾಗಲೇ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ಆಗಬೇಕು. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಾಗಬೇಕು ಎಂದರು.