

ತುಮಕೂರು: ಕಳೆದ ಬಾರಿ ಅಭಿವೃದ್ಧಿ ಕಾರ್ಯದ ಹೊರತಾಗಿಯೂ ಅನುಕಂಪದ ಮುಂದೆ ತಲೆಬಾಗಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಈ ಬಾರಿ ಬೈಎಲೆಕ್ಷನ್ನಲ್ಲಿ ವೈರಾಗ್ಯದ ಮಾತುಗಳನ್ನಾಡುತ್ತಿದ್ದಾರೆ.
ಕಾಲಗರ್ಭದಲ್ಲಿ ಎಲ್ಲರೂ ಸೇರಲೇ ಬೇಕು. ಇವತ್ತು ಸತ್ಯನಾರಾಯಣ ಸತ್ತಿದ್ದಾನೆ. ಜಯಚಂದ್ರನು ಸಾಯಲೇಬೇಕು. ಒಂದಲ್ಲ ಒಂದು ದಿನ ಎಲ್ಲರೂ ಸಾಯಲೇಬೇಕು ಎಂದು ಜಯಚಂದ್ರ ಹೇಳಿರುವ ಮಾತುಗಳು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಕಳೆದ ಚುನಾವಣೆಯಲ್ಲಿ ಸತ್ಯನಾರಾಯಣ, 'ಇದು ನನ್ನ ಕೊನೆಯ ಚುನಾವಣೆ' ಅಂತ ಮತದಾರರ ಅನುಕಂಪ ಗಿಟ್ಟಿಸಿಕೊಂಡಿದ್ದನ್ನು ಸ್ಮರಿಸಬಹುದು.
ಸತ್ಯಣ್ಣ ಸಾವಿನಿಂದ ತೆರವಾದ ಎಂಎಲ್ಎ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ನಿಂದ ಟಿ.ಬಿ.ಜಯಚಂದ್ರ ಸ್ಪರ್ಧಿಸಿದ್ದಾರೆ. ಜೆಡಿಎಸ್ನಿಂದ ದಿ. ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ, ಬಿಜೆಪಿಯಿಂದ ರಾಜೇಶ್ಗೌಡ ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿರುವ ಜಯಚಂದ್ರ, ಗುರುವಾರ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಡಾ.ಸಿ.ಎಂ.ರಾಜೇಶ್ ಗೌಡ ಬುಧವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದ್ದಾರೆ.
ಅಮ್ಮಾಜಮ್ಮಗೆ ಕರೊನಾ ತಗುಲಿತ್ತು. ಹಾಗಾಗಿ ಅವರ ಪರವಾಗಿ ಸೂಚಕರು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸುವರು. ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಮೆರವಣಿಗೆ, ಜೆಡಿಎಸ್ ಶಕ್ತಿಪ್ರದರ್ಶನ ನಡೆದಿದೆ.