

ಬೀಜಿಂಗ್: ಮತ್ತೆ ಉಲ್ಬಣಿಸಿರುವ ಕರೊನಾ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ಚೀನಾದ ಆರ್ಥಿಕ ರಾಜಧಾನಿ ಮತ್ತು ಅತಿ ದೊಡ್ಡ ನಗರವಾದ ಶಾಂಘೈನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಅಲ್ಲಿ ಈಗಾಗಲೇ ಲಾಕ್ಡೌನ್ ಘೋಷಿಸಲಾಗಿದೆಯಾದರೂ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಶಾಂಘೈ ಜನಸಂಖ್ಯೆ 2.6 ಕೋಟಿ. ನಾಯಿಗಳನ್ನು ವಿಹಾರಕ್ಕಾಗಿ ಮನೆಯಿಂದ ಹೊರಗೆ ಕರೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ. ವೈರಸ್ ಹರಡುವ ಅಪಾಯ ತಗ್ಗಿಸುವ ದೃಷ್ಟಿಯಿಂದ ಜನರು ಮನೆಗಳಿಂದ ಹೊರ ಹೋಗುವುದಿರಲಿ, ವರಾಂಡದಲ್ಲಿ ಅಡ್ಡಾಡುವುದನ್ನು ಸಹ ನಿಷೇಧಿಸಲಾಗಿದೆ. ಮನೆಗಳ ಗ್ಯಾರೇಜ್ ಅಥವಾ ಆವರಣದ ಖಾಲಿ ಜಾಗಗಳಲ್ಲಿ ಕೂಡ ಓಡಾಡುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಾಂಘೈನಲ್ಲಿ ಮಂಗಳವಾರ 4,477 ಕರೊನಾ ದೈನಿಕ ಪ್ರಕರಣ ವರದಿಯಾಗಿದೆ. ಅನೇಕ ಪ್ರಮುಖ ಹಣಕಾಸು ಕಂಪನಿಗಳು ಹಾಗೂ ಶಾಂಘೈ ಸ್ಟಾಕ್ ಎಕ್ಸ್ ಚೇಂಜ್ನ ಕಚೇರಿಯಿರುವ ಪುಡಾಂಗ್ ಜಿಲ್ಲೆಯಲ್ಲಿ ಜನರು ಮನೆಗಳಲ್ಲೇ ಇರಬೇಕಾಗಿದೆ. ಕೋವಿಡ್ ಪರೀಕ್ಷೆಗೆ ಒಳಪಡಲು ಮಾತ್ರವೇ ಹೊರಗಡೆ ಬರಬಹುದಾಗಿದೆ.
ಕಚೇರಿಗಳಲ್ಲೇ ವಾಸ್ತವ್ಯ: ಕರೊನಾ ಸೋಂಕು ಹರಡುವುದನ್ನು ತಡೆಯಲೆಂದು ಶಾಂಘೈಯ ಲುಜಿಯಾಝುುಯ್ ಜಿಲ್ಲೆಯಲ್ಲಿರುವ ಅನೇಕ ಕಚೇರಿಗಳ 20,000ಕ್ಕೂ ಹೆಚ್ಚು ಉದ್ಯೋಗಿಗಳು ರಾತ್ರಿ ಹೊತ್ತು ಕಚೇರಿಗಳಲ್ಲೇ ಉಳಿದುಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ. ಸೋಮವಾರ ಲಾಕ್ಡೌನ್ ಆರಂಭ ನಿರ್ಧಾರ ಘೋಷಣೆಯಾಗುತ್ತಿದ್ದಂತೆಯೇ ಕಂಪನಿಗಳ ಪ್ರಮುಖ ವಿಭಾಗಗಳ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಂಡ ಕಂಪನಿಗಳು ಅಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿವೆ. ಕೆಲವು ಕಂಪನಿಗಳು ಎರಡು ಟೀಮ್ಳು ಪರ್ಯಾಯ ಪಾಳಿ ಮೇಲೆ ಕೆಲಸ ಮಾಡುವ ಪದ್ಧತಿಯನ್ನು ಜಾರಿಗೆ ತಂದಿವೆ. ಲುಜಿಯಾಝುುಯ್, ಆರ್ಥಿಕ ಚಟುವಟಿಕೆಗಳಿಗೆ ಖ್ಯಾತವಾದ ಅಮೆರಿಕದ ವಾಲ್ಸ್ಟ್ರೀಟ್ಗೆ ಪರ್ಯಾಯದಂತಿದೆ.