ಇಂಜಿನಿಯರ್ಸ್ ನೇಮಕಕ್ಕೆ ಕರೊನಾ ಕಂಟಕ: ಒಟ್ಟು 870 ಹುದ್ದೆ ಭರ್ತಿ ವಿಚಾರ | ನೇಮಕ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು

mahalakshmi layout
Published on

ಬೆಂಗಳೂರು: ಲೋಕೋಪಯೋಗಿ ಇಲಾಖೆಯ 570 ಸಹಾಯಕ ಅಭಿಯಂತರ (ಸಿವಿಲ್) ಹಾಗೂ 300 ಕಿರಿಯ ಸಹಾಯಕ ಅಭಿಯಂತರರ(ಸಿವಿಲ್) ನೇಮಕ ಪ್ರಕ್ರಿಯೆಗೆ ಈಗ ‘ಕರೊನಾ ಗ್ರಹಣ’ ಆವರಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಸಂಪುಟ ಸಭೆಯಲ್ಲಿ ಕೈಗೊಂಡಿದ್ದ ನಿರ್ಧಾರವನ್ನೇ ನ್ಯಾಯಾಲಯ ರದ್ದು ಮಾಡಿದೆ. ಈ ಬೆಳವಣಿಗೆಯಿಂದ ಸರ್ಕಾರಕ್ಕೆ ಇಂಜಿನಿಯರ್​ಗಳು ಲಭ್ಯವಾಗಿಲ್ಲ, ಹುದ್ದೆ ಆಕಾಂಕ್ಷಿಗಳಿಗೆ ಕೆಲಸವೂ ಸದ್ಯಕ್ಕೆ ಸಿಗದಂತಾಗಿದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಇಂಜಿನಿಯರ್​ಗಳ ತೀವ್ರ ಕೊರತೆಯನ್ನು ಕಂಡು ಎರಡು ಶ್ರೇಣಿಯಲ್ಲಿ ಒಟ್ಟು 870 ಇಂಜಿನಿಯರ್​ಗಳ ನೇಮಕಕ್ಕೆ ಮುಂದಾಯಿತು. ಶೀಘ್ರವೇ ಇಂಜಿಯರ್​ಗಳ ಸೇವೆ ಲಭ್ಯವಾಗಬೇಕೆಂದು ಕೆಪಿಎಸ್​ಸಿ ಬದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ಆಯ್ಕೆ ಮಾಡಿಕೊಳ್ಳುವ ಮಹತ್ವದ ತೀರ್ಮಾನ ಮಾಡಿತು.

2019ರ ಮಾರ್ಚ್​ನಲ್ಲಿ ಪ್ರಕ್ರಿಯೆ ನಡೆದು, ಸರ್ಕಾರದ ಸೂಚನೆಯಂತೆ ಜೂನ್ 22ರಿಂದ 24ರವರೆಗೆ ಆಯ್ಕೆ ಪರೀಕ್ಷೆ ನಡೆದಿದ್ದು 50 ಸಾವಿರ ಇಂಜಿನಿಯರ್​ಗಳು ಪರೀಕ್ಷೆಯನ್ನೂ ಬರೆದಿದ್ದರು. ಇನ್ನೇನು ಪರೀಕ್ಷಾ ಪ್ರಾಧಿಕಾರ ಇನ್ನೇನು ಫಲಿತಾಂಶ ಪ್ರಕಟಿಸಬೇಕೆನ್ನುವಾಗಲೇ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರ ಪತನವಾಯಿತು, ಬಿಜೆಪಿ ಸರ್ಕಾರ ಬಂದಿತು. ತೀರ್ವನಗಳು ಬದಲಾದವು. ಪರೀಕ್ಷಾ ಅಕ್ರಮ, ಹೈದ್ರಾಬಾದ್ ಕರ್ನಾಟಕ ಹುದ್ದೆಗಳನ್ನು ಸೇರಿಸಬೇಕು ಎಂದೆಲ್ಲ ನೆಪ ಹೇಳಿತು.

ಬಳಿಕ ಡಿಸೆಂಬರ್​ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಮತ್ತೊಂದು ತೀರ್ಮಾನ ಮಾಡಿದ ಸರ್ಕಾರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬದಲು ಕೆಪಿಎಸ್​ಸಿಯಿಂದಲೇ ನೇಮಕ ಪ್ರಕ್ರಿಯೆ ನಡೆಸುವ ವಿವಾದಾತ್ಮಕ ಹೆಜ್ಜೆ ಇಟ್ಟಿತು. 2020ರ ಫೆಬ್ರವರಿಯಲ್ಲಿ ನೇಮಕ ಪ್ರಕ್ರಿಯೆ ಆರಂಭಿಸಿತು.

ಅದಾಗಲೇ ಸರ್ಕಾರದ ನಿರ್ಧಾರದಿಂದ ಗೊಂದಲಕ್ಕೆ ಸಿಲುಕಿದ್ದ ಅಭ್ಯರ್ಥಿಗಳು ಮತ್ತೆ ಪರೀಕ್ಷೆ ಬರೆಯಬೇಕೆ ಎಂದು ಹೌಹಾರಿದರು. ಸರ್ಕಾರ ಬದಲಾದರೆ ನಾವೇಕೆ ಮರುಪರೀಕ್ಷೆ ಬರೆಯಬೇಕೆ? ಇದೇನು ಚುನಾವಣೆಯೇ ಎಂದು ಪ್ರಶ್ನೆ ಎತ್ತಲಾರಂಭಿಸಿದರು. ಮುಖ್ಯಮಂತ್ರಿ, ಸಚಿವರನ್ನು ಕಂಡರೂ ಪ್ರಯೋಜನ ಆಗಲಿಲ್ಲ. ನಂತರ ಅವರೆಲ್ಲ ನ್ಯಾಯಾಲಯದ ಮೆಟ್ಟಿಲೇರಿದರು. ನೇಮಕ ಪ್ರಕ್ರಿಯೆಗೆ ಹೈಕೋರ್ಟ್ ನಾಲ್ಕು ವಾರ ತಡೆ ನೀಡಿದ್ದಲ್ಲದೇ ಕೆಎಟಿಯಲ್ಲಿ ಅರ್ಜಿ ಹಾಕುವಂತೆ ಅರ್ಜಿದಾರರಿಗೆ ಸೂಚಿಸಿತು. ನ್ಯಾಯಾಲಯದ ನಿರ್ದೇಶನದಂತೆ ಅಭ್ಯರ್ಥಿಗಳು ಕೆಎಟಿಯಲ್ಲಿ ನ್ಯಾಯ ಕೋರಿದರು. ಇದೀಗ ಆದೇಶ ನೀಡಿರುವ ಕರ್ನಾಟಕ ಆಡಳಿತ ನ್ಯಾಯಾಧಿಕರಣ, ಸಂಪುಟ ಕೈಗೊಂಡ ತೀರ್ವನವನ್ನೇ ರದ್ದು ಮಾಡಿದ್ದು, ಮುಂದಿನ ತೀರ್ಮಾನ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ.

ಇದರಿಂದಾಗಿ ಕೆಪಿಎಸ್​ಸಿ ಮುಂದುವರಿಯá-ವಂತಿಲ್ಲ. ಹೀಗಾಗಿ ಸರ್ಕಾರಕ್ಕೆ ಎರಡು ದಾರಿ ಉಳಿದಿದ್ದು, ಒಂದೋ ಕೆಎಟಿ ತೀರ್ಪು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಬೇಕು, ಇಲ್ಲವಾದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯ ಅನುಸಾರ ಅರ್ಹರನ್ನು ಆಯ್ಕೆ ಮಾಡಿಕೊಂಡು ನೇಮಕ ಪ್ರಕ್ರಿಯೆ ಮುಗಿಸಬೇಕು.

ಆದರೆ, ಕರೊನಾ ಸಂದರ್ಭದಲ್ಲಿ ತಕ್ಷಣಕ್ಕೆ ಇವೆರಡೂ ಕೆಲಸ ನಡೆಯುವ ಸಾಧ್ಯತೆ ಕಡಿಮೆ. ಒಟ್ಟಾರೆ ಕೆಲಸ ಸಿಕ್ಕೇಬಿಡುತ್ತೆದೆಂದು ಪರೀಕ್ಷೆ ಬರೆದು ಕಾಯ್ದಿದ್ದವರಿಗೆ ನಿರಾಸೆ ಉಂಟಾಗಿದೆ.

ಸರ್ಕಾರ ನಮಗೆ ಅನ್ಯಾಯ ಮಾಡಬಾರದು. ದ್ವೇಷ ರಾಜಕಾರಣ ಬಿಡಬೇಕು. ಪರೀಕ್ಷೆ ರದ್ದು ಮಾಡಿದ ತೀರ್ಮಾನ ಹಿಂಪಡೆದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆ ಫಲಿತಾಂಶದ ಅನುಸಾರ ಆಯ್ಕೆ ಪ್ರಕ್ರಿಯೆ ಮುಂದುವರಿಯಬೇಕು. | ನೊಂದ ಅಭ್ಯರ್ಥಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net