

ಬೆಂಗಳೂರು: ಕರೊನಾ ಮಟ್ಟಹಾಕಲು ದೇಶಾದ್ಯಂತ ಜಾರಿಗೊಳಿಸಲಾಗಿರುವ ಲಾಕ್ಡೌನ್ ಲಕ್ಷಾಂತರ ಜನರ ನಿತ್ಯದ ಅನ್ನಕ್ಕೂ ಕುತ್ತು ತಂದಿದೆ. ದಿನದ ದುಡಿಮೆಯನ್ನೇ ನಂಬಿದವರು, ಹೋಟೆಲ್, ಬೇಕರಿ, ದಾನಿಗಳು ಕೊಟ್ಟಿದ್ದನ್ನು ಉಣ್ಣುತ್ತಿದ್ದವರ ಗೋಳು ಹೇಳತೀರದಾಗಿದೆ. ಇಂತಹವರಿಗೆ ಅನ್ನ ನೀಡುವ ಮೂಲಕ ರಾಜ್ಯದ ಎಲ್ಲ ಕಡೆಗಳಲ್ಲಿನ ವಿವಿಧ ಸಾಮಾಜಿಕ ಸಂಘಟನೆಗಳು ಮಾನವೀಯತೆ ತೋರ್ಪಡಿಸುತ್ತಿವೆ. ಲಾಕ್ಡೌನ್ ಪರಿಣಾಮ ರಾಜ್ಯಾದ್ಯಂತ ಹೋಟೆಲ್, ಕ್ಯಾಂಟೀನ್, ರೆಸ್ಟೋರೆಂಟ್, ಗೂಡಂಗಡಿಗಳು ಬಾಗಿಲು ಮುಚ್ಚಿರುವ ಪರಿಣಾಮ ಸಾವಿರಾರು ನಿರ್ಗತಿಕರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಇಂತಹ ಹಲವರಿಗೆ ತಾವು ತಿನ್ನುವುದರಲ್ಲೇ ಹಂಚಿಕೊಡುವವರೂ ನಮ್ಮ ಮಧ್ಯೆಯೇ ಇದ್ದಾರೆ. ಇವರ ಜತೆಗೆ ಹಲವು ಸಂಘಟನೆಗಳು ಸಹ ಆಹಾರ ನೀಡುವ ಕಾರ್ಯವನ್ನು ಆರಂಭಿಸಿವೆ. ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಅದಮ್ಯ ಚೇತನ, ಅಕ್ಷಯ ಪಾತ್ರಾ ಮತ್ತು ನಮ್ಮ ಬೆಂಗಳೂರು ಫೌಂಡೇಷನ್(ಎನ್ಬಿಎಫ್), ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ನೇರವಾಗಿ ಕಾರ್ವಿುಕರು ಇರುವ ಸ್ಥಳಗಳಿಗೇ ಹೋಗಿ ಆಹಾರ ನೀಡಿ ಹಸಿದವರ ಹೊಟ್ಟೆ ತುಂಬಿಸುತ್ತಿವೆ. .
ಎನ್ಬಿಎಫ್ ಕಾರ್ಯ
ನಮ್ಮ ಬೆಂಗಳೂರು ಪ್ರತಿಷ್ಠಾನ(ಎನ್ಬಿಎಫ್) ಜೈನ್ ಅಂತಾರಾಷ್ಟ್ರೀಯ ಟ್ರೇಡ್ ಸಂಘಟನೆ (ಜೆಐಟಿಒ), ಭಾಸ್ಕರ್ಸ್ ಮನೆ ಹೋಳಿಗೆ, ಗಿಲ್ಗಲ್ ಚಾರಿಟಬಲ್ ಟ್ರಸ್ಟ್ ಮತ್ತು ಇತರರ ಸಹಕಾರದೊಂದಿಗೆ ಅಸಂಘಟಿತ ವಲಯದ ಕಾರ್ವಿುಕರಿಗೆ ಮತ್ತು ಕೊಳಚೆ ಪ್ರದೇಶದ ನಿವಾಸಿಗಳಿಗೆ ಆಹಾರ ವಿತರಣೆ ಮಾಡುತ್ತಿದೆ. ದಾನಿಗಳು ಆಹಾರ ಪ್ಯಾಕೆಟ್ಗಳನ್ನು ಸಂಸ್ಥೆಗೆ ತಲುಪಿಸಿದರೆ ಸಂಸ್ಥೆಯು ಅದನ್ನು ಅಗತ್ಯವುಳ್ಳವರಿಗೆ ತಲುಪಿಸಲಿದೆ.
ಅದಮ್ಯ ಸೇವೆ...
ಅದಮ್ಯ ಚೇತನ ಸಂಸ್ಥೆ ಸೋಮವಾರದಿಂದ ಬೆಂಗಳೂರಿನಲ್ಲಿ ‘ಈಸಿ ಟು ಕುಕ್ ಉಪ್ಪಿಟ್ಟು’ ಮತ್ತು ‘ಕಿಚಡಿ ಮಿಕ್ಸ್’ ವಿತರಣೆ ಮಾಡಲು ನಿರ್ಧರಿಸಿದೆ. ಕಾರ್ವಿುಕ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಸಾವಿರಾರು ಜನರ ಮನೆ ಮನೆಗೆ ಊಟ ತಲುಪಿಸುವ ಕಾರ್ಯ ಆರಂಭಿಸುವುದಾಗಿ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ. ದಿನಗೂಲಿ ನೌಕರರು, ಅಶಕ್ತರು ಹಾಗೂ ವಯಸ್ಸಾದವರ ಜತೆಗೆ ಅಗತ್ಯವಿರುವ ಕುಟುಂಬಗಳಿಗೆ ಊಟ ತಲುಪಿಸುವ ಯೋಜನೆ ಇದಾಗಿದೆ. ಕರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅದಮ್ಯ ಅಡುಗೆಮನೆ ಮತ್ತೆ ತನ್ನ ಕಾರ್ಯ ಪ್ರಾರಂಭಿಸಲಿದ್ದು, ಆಯಾ ದಿನದ ಅಗತ್ಯಕ್ಕೆ ತಕ್ಕಂತಹ ಸಂಖ್ಯೆಯಲ್ಲಿ ಅಡುಗೆ ತಯಾರಿಸಿ ಉಚಿತವಾಗಿ ಹಂಚಲಿದೆ. ಈಸಿ ಟು ಕುಕ್ ಉಪ್ಪಿಟ್ಟು ಹಾಗೂ ಕಿಚಡಿ ಮಿಕ್ಸ್ ಮತ್ತು ಉಚಿತ ಊಟದ ವ್ಯವಸ್ಥೆ ಕೈಗೊಳ್ಳುವ ಕಾರ್ಯದಲ್ಲಿ ಅಗತ್ಯವಿರುವ ಹಣ ಸಹಾಯಕ್ಕೆ ಸಂಘಸಂಸ್ಥೆಗಳು ಅಥವಾ ಸಾರ್ವಜನಿಕರು ಕೈಜೋಡಿಸಬಹುದಾಗಿದೆ.