

ನವದೆಹಲಿ: ದೇಶದಲ್ಲಿ ಪ್ರತಿನಿತ್ಯ 95 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿ ಆತಂಕ ಸೃಷ್ಟಿಸಿದ್ದ ಕರೊನಾ ಆರ್ಭಟ ಈಗ ಸ್ವಲ್ಪ ಇಳಿಕೆ ಹಾದಿ ಹಿಡಿದಿರುವುದು ಜನರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ. ಸೋಂಕು ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಪ್ರತಿದಿನದ ಏರಿಕೆ ಪ್ರಮಾಣ ಶೇ. 1ಕ್ಕಿಂತ ಕಡಿಮೆಯಾಗಿದೆ.
ಕಳೆದ ಒಂದು ವಾರದಲ್ಲಿ ಸೋಂಕಿನ ಏರಿಕೆ ಪ್ರಮಾಣ ಶೇ. 0.99 ವರದಿಯಾಗಿದೆ. ಮೇ ತಿಂಗಳ ಆರಂಭದಲ್ಲಿ ಪ್ರತಿದಿನ ಶೇ. 7ರಷ್ಟು ಸೋಂಕು ಹೆಚ್ಚಳವಾಗುತ್ತಿತ್ತು. 98 ಸಾವಿರದವರೆಗೆ ಏಕದಿನ ಏರಿಕೆ ದಾಖಲಾಗಿತ್ತು. ದೇಶದ ಬಹುತೇಕ ರಾಜ್ಯಗಳಲ್ಲಿ ಸೋಂಕು ಇಳಿಮುಖವಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ತಿಂಗಳು ಸೋಂಕು ಏರಿಕೆ ಪ್ರಮಾಣ ಶೇ. 2.22ರಷ್ಟಿತ್ತು. ಅದೀಗ ಶೇ. 0.75ಕ್ಕೆ ಇಳಿದಿದೆ. ಮೂರ್ನಾಲ್ಕು ತಿಂಗಳ ನಂತರ ರಾಜ್ಯದಲ್ಲಿ ಏಕದಿನ ಸೋಂಕಿನ ಸಂಖ್ಯೆ 7 ಸಾವಿರಕ್ಕೆ ಇಳಿದಿದೆ. ಇದನ್ನೂ ಓದಿ: ಎತ್ತರದ ಕಟ್ಟಡದಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಯುವಕನಿಗೆ ಎದುರಾಯ್ತು ಸಂಕಷ್ಟ..!
ಕೇರಳದಲ್ಲಿ ಇತ್ತೀಚೆಗೆ ಸೋಂಕಿನ ಪ್ರಮಾಣ ಏರಿಕೆ ಕಂಡಿದೆ. ಪ್ರಸ್ತುತ ರಾಜ್ಯದಲ್ಲಿ ಸೋಂಕಿನ ಏರಿಕೆ ಪ್ರಮಾಣ ಶೇ. 3.26ರಷ್ಟಿದೆ. ರಾಜ್ಯದಲ್ಲಿ ಮೊದಲ ಒಂದು ಲಕ್ಷ ಪ್ರಕರಣಕ್ಕೇರಲು 9 ತಿಂಗಳ ಕಾಲಾವಕಾಶ ಬೇಕಾಗಿತ್ತು. ಆದರೆ ಕಳೆದ ಒಂದೇ ತಿಂಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಕಳೆದ ನಾಲ್ಕು ವಾರಗಳಲ್ಲಿ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 11 ಇಳಿಕೆ ಕಂಡಿದ್ದರೆ ಕೇರಳದಲ್ಲಿ ಅದು ಶೇ. 233 ಏರಿಕೆ ದಾಖಲಿಸಿದೆ. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಸೋಂಕಿನ ಏರಿಕೆ ಪ್ರಮಾಣ ಶೇ. 1ಕ್ಕಿಂತ ಹೆಚ್ಚು ವರದಿಯಾಗಿದೆ. ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ಐಆರ್ ದಾಖಲು..!
ಕರೊನಾ ಪ್ರತಿಕಾಯ ಮನುಷ್ಯನ ದೇಹದಲ್ಲಿ ಐದರಿಂದ ಏಳು ತಿಂಗಳವರೆಗೆ ಜೀವಂತವಿರುತ್ತದೆ ಎಂದು ಅಮೆರಿಕದ ಭಾರತೀಯ ಮೂಲದ ಸಂಶೋಧಕರೊಬ್ಬರು ತಿಳಿಸಿದ್ದಾರೆ. ಅರಿಜೋನಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ದೀಪ್ತಾ ಭಟ್ಟಾಚಾರ್ಯ ಈ ಕುರಿತು ಅಧ್ಯಯನ ನಡೆಸಿದ್ದಾರೆ. ಸುಮಾರು 6 ಸಾವಿರ ಸೋಂಕಿತರ ದೇಹದಲ್ಲಿನ ಪ್ರತಿಕಾಯವನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸೋಂಕು ಜೀವಕೋಶಗಳಿಗೆ ತಗುಲಿದಾಗ, ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯು ಸೋಂಕನ್ನು ತಡೆಯಲು ಪ್ಲಾಸ್ಮಾವನ್ನು ನಿಯೋಜಿಸುತ್ತದೆ. ಆ ಪ್ಲಾಸ್ಮಾ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಸೋಂಕು ತಗುಲಿದ 14 ದಿನಗಳ ತನಕ ಪ್ರತಿಕಾಯಗಳು ರಕ್ತದ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತವೆ. ರೋಗನಿರೋಧಕ ಪ್ರತಿಕ್ರಿಯೆಯ 2ನೇ ಹಂತವಾಗಿ ದೀರ್ಘಕಾಲೀನ ಪ್ಲಾಸ್ಮಾ ಕೋಶಗಳ ರಚನೆಯಾಗುತ್ತದೆ. ಇದು ಉನ್ನತ ಗುಣಮಟ್ಟದ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಅದರಿಂದಾಗಿ ಐದರಿಂದ ಏಳು ತಿಂಗಳವರೆಗೆ ರೋಗನಿರೋಧಕ ಶಕ್ತಿ ಇರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.