ಭಾರತದಲ್ಲಿ ಸೋಂಕು ಏರಿಕೆ: ಕೇಂದ್ರ ಸರ್ಕಾರ ಕಳವಳ, 5 ರಾಜ್ಯಗಳಿಗೆ ಪತ್ರ, ನಾಲ್ಕನೇ ಅಲೆ ಸಾಧ್ಯತೆ

Corona
Published on

ನವದೆಹಲಿ: ಭಾರತದಲ್ಲಿ ಕಳೆದ ಮೂರು ದಿನಗಳಿಂದ ನಿತ್ಯ ಸರಾಸರಿ ಸಾವಿರದಂತೆ ಕರೊನಾ ಸೋಂಕು ಏರಿಕೆ ಆಗುತ್ತಿದ್ದು, ಜೂನ್ ವೇಳೆಯಲ್ಲಿ ನಾಲ್ಕನೇ ಅಲೆ ಆರಂಭವಾಗುತ್ತದೆ ಎಂಬುದು ನಿಜವಾಗುತ್ತಿದೆಯೇ ಎಂಬ ಆತಂಕವನ್ನು ಸೃಷ್ಟಿಸಿದೆ. ಶುಕ್ರವಾರ ಬೆಳಗ್ಗೆ ವರೆಗಿನ ಕರೊನಾ ಸೋಂಕು ಕುರಿತ ದೈನಿಕ ಮಾಹಿತಿಯಂತೆ ದೇಶದಲ್ಲಿ 4,041 ಹೊಸ ಕೇಸ್​ಗಳು ಪತ್ತೆಯಾಗಿದ್ದು ಇದು 84 ದಿನಗಳಲ್ಲಿ ಅತಿ ಹೆಚ್ಚಿನ ದೈನಿಕ ಪ್ರಕರಣವಾಗಿದೆ. 10 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 21,177ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಮಧ್ಯೆ, ಸೋಂಕು ಪ್ರಸರಣ ಕಡಿಮೆಯಾಗದಿದ್ದರೆ ನಿರ್ಬಂಧ ಕ್ರಮಗಳನ್ನು ಮತ್ತೆ ಜಾರಿ ಮಾಡಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಮಹಾರಾಷ್ಟ್ರದಲ್ಲಿ ಗುರುವಾರ 900ಕ್ಕೂ ಹೆಚ್ಚು ಹೊಸ ಪ್ರಕರಣಗಳು ವ್ಯಕ್ತವಾಗಿದ್ದವು.

ಕರ್ನಾಟಕ ಸಹಿತ 5 ರಾಜ್ಯಗಳಿಗೆ ಕೇಂದ್ರ ಪತ್ರ: ದೇಶದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಈ ಸಂಬಂಧ ಕರ್ನಾಟಕ ಸಹಿತ ಐದು ರಾಜ್ಯಗಳಿಗೆ ಪತ್ರ ಬರೆದು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಮಹಾರಾಷ್ಟ್ರಗಳಲ್ಲಿ ಸೋಂಕಿನ ಸ್ಥಳೀಯ ಪ್ರಕರಣಗಳು ಹೆಚ್ಚಿರುವ ಸಾಧ್ಯತೆಯಿದೆ ಎಂಬುದು ಕೇಂದ್ರದ ಅಭಿಪ್ರಾಯವಾಗಿದೆ. ರಾಜ್ಯಗಳು ಕಟ್ಟುನಿಟ್ಟಿನ ನಿಗಾವಹಿಸಬೇಕು. ಹಾಗೂ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ಹೇಳಿದ್ದಾರೆ. ಈ ಸಾಮೂಹಿಕ ಪ್ರಯತ್ನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಲ್ಲ ನೆರವನ್ನು ಮುಂದುವರಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ದೇಶದ ಹೊಸ ಕರೊನಾ ಪ್ರಕರಣಗಳಲ್ಲಿ ಕೇರಳದ ಪಾಲೇ ಶೇಕಡ 31.14ರಷ್ಟಿದೆ. ಜೂನ್ 3ರಂದು ಕೊನೆಗೊಂಡ ವಾರದಲ್ಲಿ ಆ ರಾಜ್ಯದಲ್ಲಿ 6.556 ಹೊಸ ಕೇಸ್​ಗಳು ದೃಢಪಟ್ಟಿವೆ. ಮಹಾರಾಷ್ಟ್ರದಲ್ಲಿ ಈ ವಾರ 4,883 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ದೇಶದ ಪ್ರಸಕ್ತ ಕರೊನಾ ಪ್ರಕರಣಗಳಲ್ಲಿ ಈ ರಾಜ್ಯದ ಪಾಲು ಶೇಕಡ 23.19 ಆಗಿದೆ.

ಪ್ರಿಯಾಂಕಾ ಗಾಂಧಿಗೆ ಸೋಂಕು: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಕರೊನಾ ಸೋಂಕು ದೃಢಪಟ್ಟಿದೆ. ತಾವು ಸ್ವಯಂ ಐಸೊಲೇಷನ್​ನಲ್ಲಿ ಇರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ. ಅವರ ತಾಯಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸೋಂಕು ಇರುವುದು ಗುರುವಾರ ದೃಢಪಟ್ಟಿತ್ತು.

ಮಂಕಿಪಾಕ್ಸ್ ತಡೆಗೆ ತಮಿಳುನಾಡು ನಿರ್ಧಾರ: ಮಂಕಿಪಾಕ್ಸ್ ಸೋಂಕಿನ ಲಕ್ಷಣವಿರುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಐಸೊಲೇಷನ್​ಗೆ ಒಳಪಡಿಸಲಾಗುವುದೆಂದು ತಮಿಳು ನಾಡು ಆರೋಗ್ಯ ಇಲಾಖೆ ಶುಕ್ರವಾರ ತಿಳಿಸಿದೆ. ಈ ಸಂಬಂಧ ರಾಜ್ಯದ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ವೈದ್ಯರಿಗೆ ಸುತ್ತೋಲೆ ಕಳಿಸಿದೆ. ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಮತ್ತು ಯುರೋಪ್​ನಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿರುವುದರಿಂದ ಮುನ್ನೆಚ್ಚರಿಕೆಯಾಗಿ ಈ ಕ್ರಮಕೈಗೊಳ್ಳಲಾಗಿದೆ.

ಅಮೆರಿಕದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೂ ವ್ಯಾಕ್ಸಿನ್: ಅಮೆರಿಕದಲ್ಲಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೂ ಕರೊನಾ ತಡೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಸಂಬಂಧ ಪಟ್ಟ ಸಂಸ್ಥೆ ಅನುಮತಿ ಕೊಟ್ಟರೆ ಜೂನ್ 21ರಿಂದಲೇ ಈ ವಯಸ್ಸಿನವರಿಗೆ ಲಸಿಕೆ ಹಾಕಲಾಗುತ್ತದೆ ಎಂದು ಶ್ವೇತ ಭವನದ ಕೋವಿಡ್ ಸೋಂಕು ತಡೆ ತಂಡದ ಸಮನ್ವಯಕಾರ, ಭಾರತೀಯ ಮೂಲದ ಆಶಿಶ್ ಝಾ ಗುರುವಾರ ಹೇಳಿದ್ದಾರೆ. ಅಮೆರಿಕದಲ್ಲಿ ಈವರೆಗೆ ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು ಅದಕ್ಕಿಂತ ಕೆಳಗಿನ ವಯೋಮಿತಿಯ ಮಕ್ಕಳು ಮಾತ್ರ ಲಸಿಕೆ ಅಭಿಯಾನದಿಂದ ಹೊರಗಿದ್ದಾರೆ. ಮಕ್ಕಳಲ್ಲಿ ಫೈಜರ್ ಮತ್ತು ಮಾಡರ್ನಾ ಲಸಿಕೆಗಳ ಪರಿಣಾಮದ ಬಗ್ಗೆ ಆಹಾರ ಮತ್ತು ಔಷಧ ಸಂಸ್ಥೆಯ (ಎಫ್​ಡಿಎ) ಬಾಹ್ಯ ತಜ್ಞರ ಸಮಿತಿ ಮೌಲ್ಯಮಾಪನ ಮಾಡುತ್ತಿದ್ದು, ಸಮಿತಿಯ ಸಭೆ ಜೂನ್ 14 ಮತ್ತು 15ರಂದು ನಡೆಯಲಿದೆ. ಅದರಲ್ಲಿ ಅನುಮೋದನೆ ನೀಡಿದರೆ ಅದರ ಮರುವಾರವೇ ಐದಕ್ಕಿಂತ ಕಡಿಮೆ ವಯಸ್ಸಿನ ಚಿಣ್ಣರಿಗೆ ಲಸಿಕೆ ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ ಎಂದು ಝಾ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net