

ಬೆಂಗಳೂರು: 'ಉಪ್ಪಿ 2' ಬಿಡುಗಡೆಯಾಗಿ ಸುಮಾರು ಏಳು ವರ್ಷಗಳ ನಂತರ ಉಪೇಂದ್ರ ಕೊನೆಗೂ ನಿರ್ದೇಶನಕ್ಕಿಳಿದಿದ್ದಾರೆ. ಅವರ ಹೊಸ ಚಿತ್ರ 'ಯು/ಐ' ಶುಕ್ರವಾರ ಅಧಿಕೃತವಾಗಿ ಪ್ರಾರಂಭವಾಗಿದೆ. ಲಹರಿ ಸಂಸ್ಥೆ ಮತ್ತು ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ನಿಮಿರ್ಸುತ್ತಿರುವ ಈ ಚಿತ್ರದ ಮುಹೂರ್ತ ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆದಿದೆ. ಈ ಮುಹೂರ್ತಕ್ಕೆ ಸುದೀಪ್ ಮುಖ್ಯ ಅತಿಥಿಯಾಗಿ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಶಿವರಾಜಕುಮಾರ್, ಧನಂಜಯ್, ವಸಿಷ್ಠ ಸಿಂಹ ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು. ಆ ನಂತರ ಉಪೇಂದ್ರ ಮಾಧ್ಯಮದವರೊಂದಿಗೆ ಹಲವು ವಿಷಯಗಳನ್ನು ಮಾತನಾಡಿದರು. ಆದರೆ, ಅಪ್ಪಿತಪ್ಪಿಯೂ ಚಿತ್ರದ ಬಗ್ಗೆ ಮಾತನಾಡಲಿಲ್ಲ ಅಥವಾ ಚಿತ್ರದ ರಹಸ್ಯಗಳನ್ನು ಅವರು ಬಿಟ್ಟುಕೊಡಲಿಲ್ಲ. ತಮ್ಮ ಎಂದಿನ ಶೈಲಿಯಲ್ಲಿ ನಗುತ್ತಲೇ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು.
* ಸಿನಿಮಾ ದೃಶ್ಯ ಮಾಧ್ಯಮ. ದೃಶ್ಯ ನೋಡಿ ಕಲ್ಪನೆ ಮಾಡಿಕೊಳ್ಳಬೇಕು. ಒಬ್ಬ ಚಿತ್ರ ಕಲಾವಿದ ಒಂದು ಚಿತ್ರ ಬರೆಯುತ್ತಾನೆ. ಅದನ್ನು ಅವನೇ ಚೆನ್ನಾಗಿದೆ ಎಂದರೆ ಚೆನ್ನಾಗಿರುತ್ತದಾ? ನೀವು ನೋಡಿ ಹೇಳಿದ್ರೆ ಅದಕ್ಕೊಂದು ಬೆಲೆ ಇರುತ್ತದೆ.
* ನಾನು ಯಾವತ್ತೂ ಕನ್ವಿನ್ಸ್ ಮಾಡೋಕೇ ಚಿತ್ರ ಮಾಡೋದು. ಅದರೆ, ಕನ್ಫ್ಯೂಸ್ ಮಾಡ್ತೀನಿ ಅಂದುಕೊಳ್ಳುತ್ತಾರೆ. ಸತ್ಯವೇ ಗೊಂದಲ ಆಗಿಬಿಟ್ಟಿದೆ ನಮ್ಮ ಜನಕ್ಕೆ. ಅದು ಯಾರ ತಪ್ಪು? ಕನ್ವಿನ್ಸ್ ಆಗುವವರಿಗೆ ಕನ್ವಿನ್ಸ್ ಮಾಡುತ್ತೇನೆ. ಕನ್ಫ್ಯೂಸ್ ಆಗುವವರು ಯಾವಾಗಲೂ ಕನ್ಫ್ಯೂಸ್ ಆಗಿರುತ್ತಾರೆ.
* ನನ್ನ ಯೋಗ್ಯತೆಗಿಂತ ಜಾಸ್ತಿ ನನ್ನನ್ನು ಹೊಗಳಿದ್ದಾರೆ. ನನ್ನನ್ನು ಅಂತಾರಾಷ್ಟ್ರೀಯ ಮಟ್ಟದ ನಿರ್ದೇಶಕ ಅಂದರು. ನನ್ನ ಜತೆ ಚಿತ್ರ ಮಾಡೋದೇ ಅದೃಷ್ಟ ಅಂದರು. ನಿಜ ಹೇಳಬೇಕೆಂದರೆ, ಇದೆಲ್ಲ ನನ್ನ ಅದೃಷ್ಟ.
* ನಿನ್ನ ತಲೆ ಸ್ಪೆಷಲ್ ಆಗಿ ಓಡುತ್ತೆ ಅಂತ ಬಹಳಷ್ಟು ಜನ ಹೇಳುತ್ತಾರೆ. ಅದು ಸುಳ್ಳೂ. ಇದೊಂದು ಖಾಲಿ ತಲೆ. ನಾನದ್ದನ್ನು ಖಾಲಿ ಇಟ್ಟುಕೊಳ್ಳುತ್ತೀನಿ ಅಷ್ಟೇ. ಖಾಲಿ ಇಟ್ಟುಕೊಂಡರೆ ಏನೇನು ಐಡಿಯಾಗಳು ಬರುತ್ತವೆ ಅಂತ ಗೊತ್ತಾಗುತ್ತದೆ. ನಾವು ಮಾಡುವ ತಪ್ಪೇನೆಂದರೆ, ನಾವು ಖಾಲಿ ಇಟ್ಟುಕೊಳ್ಳುವುದಿಲ್ಲ. ಏನೇನೋ ವಿಷಯಗಳನ್ನು ತುಂಬುಕೊಳ್ಳುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಸಿನಿಮಾ ಮಾಡಬೇಕೆಂದರೆ 'ಕೆಜಿಎಫ್' ತರಹ ಇರಬೇಕು ಅಂತೇನಿಲ್ಲ. ಅದೊಂದು ಸಿನಿಮಾ ಅಷ್ಟೇ. ನಾವು ಇನ್ನೊಂದು ಸಿನಿಮಾ ಮಾಡೋಣ. ಜನ ಅದರ ಬಗ್ಗೆ ಮಾತಾಡಬೇಕು. ಅದು ನಿಜವಾದ ಸಾಧನೆ. ಪ್ರತಿಯೊಬ್ಬರು ಸಹ ಅದೇ ಯೋಚನೆ ಮಾಡಬೇಕು. ನಾವು ನಮ್ಮ ಮಕ್ಕಳಿಗೆ ತೆಂಡುಲ್ಕರ್ ಆಗು, ರಾಜಕುಮಾರ್ ಆಗು, ಕಲಾಂ ಆಗು ಅಂತ ಹೇಳಬಾರದು. ನೀನು ಸುರೇಶ್ ಆಗು, ರಮೇಶ್ ಆಗು, ಲತಾ ಆಗು ಅಂತ ಹೇಳಬೇಕು.
* ಸಿನಿಮಾ ವಿಭಿನ್ನವಾಗಿರುತ್ತದೆ. ಅದ್ಧೂರಿಯಾಗಿರುತ್ತದೆ. ದೊಡ್ಡ ನಿರ್ಮಾಪಕರು ಸಿಕ್ಕಿದ್ದಾರೆ. ಬಜೆಟ್ ಲಿಮಿಟ್ ಬೇಡ ಅಂದಿದ್ದಾರೆ. ಆದರೆ, ಹಾಗೆ ನಾನು ಮಾಡಲ್ಲ. ಸಿನಿಮಾಗೆ ಏನು ಹೇಳಿದ್ದೀನೋ ಅದನ್ನು ಅವರು ಮಾಡುತ್ತಾರೆ. ನಾನು ಏನು ಹೇಳಿದ್ದೀನೋ ಅದನ್ನು ಮಾತ್ರ ಮಾಡುತ್ತೇನೆ. ಏನೋ ಹೇಳಿ, ಇನ್ನೇನೋ ಮಾಡುವುದಿಲ್ಲ.
* ನಾನು ಸ್ಕ್ರಿಪ್ಟ್ ಯಾರಿಗೂ ಹೇಳುವುದಿಲ್ಲ ಅಂತ ಬಹಳ ಜನ ಹೇಳುತ್ತಾರೆ. ಆದರೆ, ಸಹಾಯಕ ನಿರ್ದೇಶಕರಿಂದ ಪ್ರೊಡಕ್ಷನ್ ಬಾಯ್ವರೆಗೂ ಪ್ರತಿಯೊಬ್ಬರಿಗೂ ಹೇಳುತ್ತೇನೆ. ಅವರು ಬೇರೆಯವರಿಗೆ ಹೇಳೋಕೆ ಆಗದಿರಬಹುದು. ನಾನಂತೂ ಎಲ್ಲರಿಗೂ ಹೇಳುತ್ತೇನೆ. ಏಕೆಂದರೆ, ಎಲ್ಲರಿಗೂ ಸ್ಕ್ರಿಪ್ಟ್ ಗೊತ್ತಿದ್ದರೆ, ಚಿತ್ರ ಚೆನ್ನಾಗಿ ಬರುತ್ತದೆ ಅನ್ನೋದು ನನ್ನ ನಂಬಿಕೆ. ನಾನು ಯಾವತ್ತೂ ಮುಚ್ಚಿಟ್ಟುಕೊಂಡು ಸಿನಿಮಾ ಮಾಡುವುದಿಲ್ಲ. ಈ ಕಥೆ ನಾನು ಎಷ್ಟು ಜನರಿಗೆ ಹೇಳಿದ್ದೇನೆ ಎಂದರೆ, ಇದು ನಂದು ಅಂತ ಯಾರು ಬರುತ್ತಾರೋ ಗೊತ್ತಿಲ್ಲ. ಆದರೆ, ಅವರಿಗೆ ಗೊತ್ತಿಲ್ಲ, ನಿನ್ನೆ ಹೇಳಿರುವುದು, ನಾಳೆ ಬದಲಾಗುತ್ತದೆ ಎಂದು.
* ನಾನು ಪ್ರಜಾಕೀಯ ಮಾಡಿರುವುದು ನನಗಲ್ಲ. ಅದು ಎಲ್ಲರಿಗೂ ಮಾಡಿರುವ ಪಕ್ಷ. ಎಷ್ಟು ಸಾರಿ ಹೇಳಿದರೂ ಯಾರಿಗೂ ಅರ್ಥವಾಗುತ್ತಿಲ್ಲ. ಪ್ರಜಾಕೀಯ ನನ್ನದು, ಉಪೇಂದ್ರ ಏನೋ ಐಡಿಯಾ ಇಟ್ಟುಕೊಂಡು ಬಂದಿದ್ದಾನೆ, ನಮ್ಮಿಂದ ಕೆಲಸ ಮಾಡಿಸಿ ಸಿಎಂ ಆಗುತ್ತಾನೆ ಅಂತ ಬಹಳಷ್ಟು ಜನ ಅಂದುಕೊಂಡಿದ್ದಾರೆ. ನಾನು ಯಾವತ್ತೂ ಸಿಎಂ. ಕಾಮನ್ ಮ್ಯಾನ್ ಅಲ್ಲ, ಚೀಫ್ ಮಿನಿಸ್ಟರ್. ಯಾಕೆ ಹೇಳಿ? ಸಿಎಂನ ಕಾಮನ್ ಮ್ಯಾನ್ ಮಾಡಿ, ಕಾಮನ್ ಮ್ಯಾನ್ನ ಸಿಎಂ ಮಾಡೋಕೆ ಹೊರಟಿರುವವನು ನಾನು. ಹಾಗಾಗಿ, ನಾನು ಯಾವತ್ತೂ ಚೀಫ್ ಮಿನಿಸ್ಟರ್ ಆಗಿಯೇ ಇರುತ್ತೇನೆ.
* ಇಡೀ ಚಿತ್ರ ನಿರ್ದೇಶಕರ ಸ್ಟೈಲ್ನಲ್ಲಿರುತ್ತದೆ. ನಾನು ನಿರ್ದೇಶಕನಾಗಿದ್ದಾಗ ಬಹಳ ಸ್ಟ್ರಾಂಗ್ ಆಗಿ ಇರುತ್ತೇನೆ. ತುಂಬಾ ಕಮಾಂಡಿಂಗ್ ಆಗಿ ಇರುತ್ತೇನೆ. ಕಲಾವಿದನಾಗಿದ್ದಾಗ ಬೇರೆ. ನನಗೆ ಯಾರಾದರೂ ಬಂದು ಕಥೆ ಹೇಳಿದಾಗ, ನಾವು ಅವರನ್ನು ನಂಬುತ್ತೇನೆ. ಅವರು ಹೇಳಿದಂತೆ ಮಾಡಲಿಲ್ಲ ಅಂದರೆ, ಎಲ್ಲರಿಗೂ ತೊಂದರೆ. ಎಷ್ಟೋ ಸಾರಿ, ಏನೇ ಬೇಸರವಾದರೂ ಅದನ್ನು ನುಂಗಿಕೊಂಡು ಸುಮ್ಮನಿದ್ದೇನೆ. ಏಕೆಂದರೆ, ಅಲ್ಲಿ, ನಾನೊಬ್ಬ ಕಲಾವಿದ ಮಾತ್ರ. ನಿರ್ದೇಶಕನಾಗಿದ್ದಾಗ, ನಾನು ಏನು ಅಂದುಕೊಂಡಿದ್ದೇನೋ ಅದನ್ನೇ ಮಾಡುತ್ತೇನೆ. ಅದಕ್ಕೇ ಜನ ನನ್ನ ಬಗ್ಗೆ ಅಷ್ಟು ನಂಬಿಕೆ ಇಟ್ಟಿರುತ್ತಾರೆ. ನಾನು ಅದನ್ನು ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಹೀಗಿದ್ದರೆ ಸಿನಿಮಾ ಮಾಡೋಣ. ಇಲ್ಲವಾದರೆ ಬೇಡ ಎಂದು ಮೊದಲೇ ಹೇಳಿಬಿಡುತ್ತೇನೆ. ಆಗ ಎಲ್ಲರಿಗೂ ಒಳ್ಳೆಯದು. ಪ್ರಾಮಾಣಿಕವಾಗಿರುವುದಕ್ಕಿಂತ ಇನ್ನೊಂದು ಯಶಸ್ಸು ಇಲ್ಲ.
* ಮಾರ್ಕೆಟ್ಗಾಗಿ ಸಿನಿಮಾ ಮಾಡುವುದಿಲ್ಲ. ಪ್ಯಾನ್ ಇಂಡಿಯಾ ಅಂತಂದುಕೊಂಡು ಮಾಡಿದರೆ, ಅದು ಪ್ಯಾನ್ ಇಂಡಿಯಾ ಚಿತ್ರವಾಗುವುದಿಲ್ಲ. ನಮ್ಮ ಕೆಲಸವನ್ನು ಚೆನ್ನಾಗಿ ಮಾಡಿದರೆ, ಚೆನ್ನಾಗಿ ಆಗುತ್ತದೆ.