More

    ನೀನು ನಾನು ಉಪ್ಪಿ ಹೇಳೋದು ಏನು?

    |ಚೇತನ್ ನಾಡಿಗೇರ್ ಬೆಂಗಳೂರು

    ಉಪೇಂದ್ರ ನಿರ್ದೇಶನದ ಹೊಸ ಚಿತ್ರ ‘ಯು/ಐ’ ಇಂದು ಪ್ರಾರಂಭವಾಗುತ್ತದೆ. ಈಗಾಗಲೇ ಬಿಡುಗಡೆ ಯಾಗಿರುವ ಪೋಸ್ಟರ್​ಗಳು ಸಾಕಷ್ಟು ಕುತೂಹಲ ಮೂಡಿಸಿವೆ. ಈ ಚಿತ್ರದಲ್ಲಿ ಉಪೇಂದ್ರ ಏನು ಹೇಳುವುದಕ್ಕೆ ಹೊರಟಿದ್ದಾರೆ ಎಂಬ ಪ್ರಶ್ನೆ ಸಹಜ. ಆದರೆ, ಉಪೇಂದ್ರ ಈ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುವುದಿಲ್ಲ. ಅದರ ಬದಲು ಅವರೇ ಇನ್ನಷ್ಟು ಪ್ರಶ್ನೆಗಳನ್ನು ಹಾಕುತ್ತಾರೆ. ತಮ್ಮ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಏನೆಲ್ಲ ಕುತೂಹಲಗಳಿವೆ ಎಂಬುದನ್ನು ಪ್ರಶ್ನೆಗಳ ಮೂಲಕವೇ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ.

    ಈ ಹಿಂದೆ ಉಪೇಂದ್ರ ಅವರ ಐಡಿಯಾಲಜಿಗಳು ಮತ್ತು ಮನಸ್ಥಿತಿ ಕೆಲವೊಮ್ಮೆ ಚಿತ್ರಗಳ ರೂಪದಲ್ಲಿ ಹೊರಬಂದಿವೆ. ಹಾಗೆಯೇ ಇವತ್ತಿನ ಮನಸ್ಥಿತಿ ಸಹ ಈ ಚಿತ್ರದಲ್ಲಿ ಮೂಡಿಬರುತ್ತದಾ ಎಂಬ ಪ್ರಶ್ನೆ ಅವರ ಮುಂದಿಟ್ಟರೆ, ಯಾವ ಮನಸ್ಥಿತಿ ಎಂಬ ಉತ್ತರ ರೂಪದ ಪ್ರಶ್ನೆ ಅವರಿಂದ ಬರುತ್ತದೆ. ಅದೇ ಪ್ರಜಾಕೀಯದ ಐಡಿಯಾಲಜಿ ಎಂದರೆ, ‘ಅದನ್ನು ಒಂದು ಸಂಭಾಷಣೆಯಲ್ಲಿ ಹೇಳಬಹುದಲ್ಲ. ಅದಕ್ಕೆ ಚಿತ್ರ ಮಾಡಬೇಕಾ?’ ಎಂಬ ಮರುಪ್ರಶ್ನೆ ಅವರಿಂದ ಬರುತ್ತದೆ. ಈ ಚಿತ್ರದಲ್ಲಿ ಮನರಂಜನೆ ಮುಖ್ಯವಾಗಿರುತ್ತದಂತೆ.

    ಅದರ ಜತೆಗೆ ಒಂದಿಷ್ಟು ಹೊಸತನಗಳೂ ಇರುತ್ತವಂತೆ. ಆದರೆ, ಅದೇನೆಂದು ಈಗಲೇ ಹೇಳಿಬಿಟ್ಟರೆ ಹೊಸತನ ಎಲ್ಲಿರುತ್ತದೆ? ಎಂಬುದು ಅವರ ಕಳವಳ. ಹೋಗಲಿ ಅದೇನಂದು ಹೇಳದೆ, ಚಿತ್ರ ಯಾವ ಜಾನರ್​ನದ್ದಾಗಿರುತ್ತದೆ? ಈ ಬಾರಿ ಏನು ಹೇಳೋಕೆ ಹೊರಟಿದ್ದೀರಾ? ಎಂಬುದನ್ನಾದರೂ ಹೇಳಿ ಎಂದರೆ, ‘ಸಸ್ಪೆನ್ಸ್ ಚಿತ್ರ ಮಾಡಿದರೆ ‘ಶ್’ ತರಹ ಇದೆ ಎನ್ನುತ್ತೀರಾ. ರೌಡಿಸಂ ಮಾಡಿದರೆ ‘ಓಂ’ ಅಂತೀರಾ. ಲವ್​ಸ್ಟೋರಿ ಅಂದರೆ ‘ಎ’, ಸೈಕಲಾಜಿಕಲ್ ಅಂದರೆ ‘ಉಪೇಂದ್ರ’ ಅಂತೀರಾ. ಇವಿಷ್ಟು ಅಲ್ಲದ ಜಾನರ್​ನಲ್ಲಿ ಏನೋ ಹೇಳಬೇಕು ಅಂತ ಅಂದುಕೊಂಡಿದ್ದೀನಿ. ಒಬ್ಬ ಪೇಂಟಿಂಗ್ ಮಾಡಿರುತ್ತಾನೆ. ಅದನ್ನು ಬಂದು ನೋಡಿದವನು, ಅದು ಯಾವ ರೀತಿ ಇದೆ ಎಂದು ಹೇಳಬೇಕು.

    ಅದು ಬಿಟ್ಟು ಚಿತ್ರ ಬಿಡಿಸಿದವನೇ ಅದರ ಬಗ್ಗೆ ಹೇಳಿಕೊಂಡರೆ ಚೆನ್ನಾಗಿರುತ್ತದಾ?’ ಎಂಬುದು ಅವರ ಪ್ರಶ್ನೆ. ಪ್ರಶ್ನೆಗಳನ್ನು ಹಾಕಿಕೊಳ್ಳುವ ತರಹ ಮಾಡುವುದೇ ತಮ್ಮ ಸಿನಿಮಾ ಎನ್ನುತ್ತಾರೆ ಉಪೇಂದ್ರ. ‘ನಿಜ ಹೇಳಬೇಕೆಂದರೆ, ಇದೇ ನನ್ನ ಸಿನಿಮಾ. ಪ್ರಶ್ನೆಗಳನ್ನು ಹಾಕಿಕೊಳ್ಳುವ ತರಹ ಮಾಡು ವುದೇ ನನ್ನ ಸಿನಿಮಾ. ಉತ್ತರ ಹೇಳುವುದು ಬಹಳ ಸುಲಭ. ಆದರೆ, ಪ್ರಶ್ನೆಗಳನ್ನು ಹಾಕಿಕೊಂಡು, ಅದಕ್ಕೆ ಉತ್ತರಗಳನ್ನು ಕಂಡುಕೊಳ್ಳಬೇಕೆನ್ನುವುದು ನನ್ನ ಉದ್ದೇಶ. ಹೀಗೆ ಪ್ರಶ್ನೆಗಳನ್ನು ಹಾಕಿಕೊಂಡು ಬಂದವರು, ಅವರೇ ಚಿತ್ರ ನೋಡಿ ತಮ್ಮದೇ ರೀತಿಯಲ್ಲಿ ಉತ್ತರಗಳನ್ನು ಕಂಡುಕೊಳ್ಳಬೇಕು ಎನ್ನುವುದು ನನ್ನ ಆಸೆ. ನಿಮ್ಮೊಳಗೆ ನಾನು ಆಗಬಹುದು. ನನ್ನೊ ಳಗೆ ನೀವು ಆಗಬಹುದು. ಒಂದು ಸಿನಿಮಾ ಒಬ್ಬೊಬ್ಬರಿಗೆ ಒಂದು ರೀತಿ ಕಾಣಿಸುವಂತಿದ್ದರೆ ಅದರ ಮಜವೇ ಬೇರೆ. ಆ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇನೆ. ಸದ್ಯಕ್ಕೆ ಇಷ್ಟು, ಮಿಕ್ಕಿದ್ದೆಲ್ಲ ಆಮೇಲೆ’ ಎಂದು ಹೇಳುತ್ತಲೇ ಈ ಪ್ರಶ್ನಾವಳಿಯನ್ನು ಮುಗಿಸುತ್ತಾರೆ ಉಪ್ಪಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts