

ಬೆಂಗಳೂರು: ಬರೋಬ್ಬರಿ ಏಳು ತಿಂಗಳಿಂದ ಜನರ ಬದುಕನ್ನು ಬರ್ಬಾದ್ ಮಾಡಿರುವ ಕರೊನಾ ಕರಿನೆರಳು ಚುನಾವಣೆ ಮೇಲೂ ಬಿದ್ದಿದೆ. ವಿಧಾನಸಭೆಯ ಎರಡು ಹಾಗೂ ವಿಧಾನಪರಿಷತ್ನ ನಾಲ್ಕು ಸ್ಥಾನಗಳ ಚುನಾವಣೆ ಕಾವು ರಂಗೇರುತ್ತಿದ್ದು, ಪ್ರಚಾರಕ್ಕೆ ಕರೊನಾ ಆತಂಕ ಕಾಡುತ್ತಿದೆ. ದಿನೇದಿನೆ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಹೋಗಲು ರಾಜಕೀಯ ನಾಯಕರು ಹಿಂದೆ ಮುಂದೆ ನೋಡುವ ಪರಿಸ್ಥಿತಿ ನಿರ್ವಣವಾಗಿದೆ.
ಶಿರಾ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಬೆಂಗಳೂರು ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಆಗ್ನೇಯ ಮತ್ತು ಈಶಾನ್ಯ ಪದವೀಧರ ಕ್ಷೇತ್ರಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ವಿಶೇಷವಾಗಿ ಮೇಲ್ಮನೆ ಚುನಾವಣೆಗೆ ಸ್ಪರ್ಧಿಸಿರುವವರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಕೆಲವರು ಪ್ರಚಾರ ಭರಾಟೆಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡರೆ ಹೇಗೆಂಬ ಭಯದಲ್ಲಿದ್ದಾರೆ. ಸೋಂಕು ಕಾಣಿಸಿಕೊಂಡು ಕ್ವಾರಂಟೈನ್ ಆದರೆ ಪ್ರಚಾರಕ್ಕೆ ಏಟು ಬೀಳುತ್ತಿದೆ ಎಂಬ ದುಗುಡ ಅಭ್ಯರ್ಥಿಗಳಲ್ಲಿ ಮನೆ ಮಾಡಿದೆ.
ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳ ವ್ಯಾಪ್ತಿ ಬಹಳ ದೊಡ್ಡದಿರುವುದರಿಂದ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಓಡಾಡಬೇಕಾದ ಅನಿವಾರ್ಯತೆ ಇದೆ. ಅನೇಕ ಕಡೆ ಕಂಟೇನ್ಮೆಂಟ್ ವಲಯಗಳಿಗೂ ತೆರಳಿ ಮತಯಾಚನೆ ಮಾಡುವ ಪರಿಸ್ಥಿತಿ ಇದೆ. ಹಾಗಾಗಿ ಅಭ್ಯರ್ಥಿಗಳು ಹಾಗೂ ಅವರ ಹಿಂಬಾಲಕರು, ಪಕ್ಷದ ಮುಖಂಡರು ಪ್ರಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸ್ಟಾರ್ ಪ್ರಚಾರಕರಾಗಿ ಬರಲು ಪಕ್ಷದ ಮುಖಂಡರು ಕೂಡ ಮೀನಮೇಷ ಎಣಿಸುತ್ತಿದ್ದಾರೆ. ಜನ ಗುಂಪುಗೂಡಿಸಿ ಪ್ರಚಾರ ಹೇಗೆ? ಈ ಸಂಕೀರ್ಣ ಸಂದರ್ಭದಲ್ಲಿ ಮತದಾರರನ್ನು ಸೆಳೆಯುವುದು ಹೇಗೆ? ಎಂಬ ಚಿಂತೆ ಅಭ್ಯರ್ಥಿಗಳನ್ನು ಹಾಗೂ ಪಕ್ಷದ ವರಿಷ್ಠರನ್ನು ಕಾಡುತ್ತಿದೆ. ಈಗಾಗಲೇ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಪ್ರಮುಖರು ಕರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದಾರೆ. ಚೇತರಿಸಿಕೊಂಡವರಿಗಂತೂ ಮತ್ತೇನಾದರೂ ಸೋಂಕು ತಗುಲಿದರೆ ಕಷ್ಟ ಎಂಬ ಕಾರಣ ಆತಂಕ ಇಮ್ಮಡಿಯಾಗಿದೆ.
ಕರೊನಾ ಆತಂಕದಿಂದ ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಫ್ಲಾಟ್ ಫಾರ್ಮ್ಗಳನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಲು ಅಭ್ಯರ್ಥಿಗಳು ಮುಂದಾಗಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಜಾಲತಾಣ ಬಳಕೆ ಹೆಚ್ಚು ಉಪಯುಕ್ತ ಎಂಬ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.