

ನವದೆಹಲಿ: ದೇಶದಲ್ಲಿ ಹಲವು ರಾಜಕಾರಣಿಗಳು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಹಾಗೇ ಒಂದು ವಾರ..ಹತ್ತು ದಿನಗಳ ನಂತರ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಿದ್ದಾರೆ. ಆದರೆ ಈ ಕಾಂಗ್ರೆಸ್ ನಾಯಕ ಕೊವಿಡ್-19 ಸೋಂಕಿಗೆ ಒಳಗಾಗಿ ಮೂರು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಇದೀಗ ಡಿಸ್ಚಾರ್ಜ್ ಆಗಿದ್ದಾರೆ.
ಗುಜರಾತ್ನ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಭರತ್ ಸೋಲಂಕಿ (66) ಸತತ ಮೂರು ತಿಂಗಳು ಕರೊನಾ ವಿರುದ್ಧ ಹೋರಾಡಿ, ಕೊನೆಗೂ ಗೆದ್ದಿದ್ದಾರೆ.
ತಮ್ಮ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನು 101 ದಿನಗಳ ಬಳಿಕ ಕೊವಿಡ್-19ನಿಂದ ಚೇತರಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆಯ ಶಕ್ತಿಯಿಂದ ನಾನು ಸಂಪೂರ್ಣ ಗುಣಮುಖನಾಗಿದ್ದೇನೆ. ವೈದ್ಯಕೀಯ ತಂಡ ಮತ್ತು ನಾನು ಬೇಗನೇ ಗುಣಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಸೋಲಂಕಿ ಹೇಳಿದ್ದಾರೆ. ಇದನ್ನೂ ಓದಿ: ಈ ಸರ್ಕಾರ ಯಾವಾಗ ಹೋಗುತ್ತೋ ಗೊತ್ತಿಲ್ಲ: ಸಚಿವ ಆನಂದ್ ಸಿಂಗ್ ಅಚ್ಚರಿಯ ಹೇಳಿಕೆ
ಹಾಗೇ 101 ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೋಲಂಕಿಯವರ ಜತೆ ಪ್ರಧಾನಿ ನರೇಂದ್ರ ಮೋದಿಯವರೂ ಮಾತನಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ಭರತ್ ಸೋಲಂಕಿ ಅವರೊಂದಿಗೆ ಮಾತನಾಡಿದ್ದೇನೆ. ಆರೋಗ್ಯದ ಬಗ್ಗೆಯೂ ವಿಚಾರಿಸಿದ್ದೇನೆ. ಕೊವಿಡ್-19 ವಿರುದ್ಧ 100 ದಿನಗಳ ಕಾಲ ಧೈರ್ಯದಿಂದ ಹೋರಾಡಿದ್ದಾರೆ. ಅವರು ಇನ್ನು ಮುಂದೆ ಸದಾ ಆರೋಗ್ಯದಿಂದ ಇರಲಿ ಎಂದು ಹಾರೈಸಿದ್ದಾರೆ.
ಹಾಗೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೂ ಕೂಡ ಸೋಲಂಕಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. (ಏಜೆನ್ಸೀಸ್)