

ಮಂಗಳೂರು: ಸುಳ್ಯ ತಾಲೂಕಿನ ಅರಂತೋಡುವಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ 62 ಮಂದಿಗೆ ಕರೊನಾ ವೈರಸ್ ತಗುಲುವ ಭೀತಿ ಎದುರಾಗಿದೆ. ಸದ್ಯ ಆರೋಗ್ಯ ಇಲಾಖೆ ಅವರನ್ನೆಲ್ಲ ಕ್ವಾರಂಟೈನ್ ಮಾಡಿದೆ.
ಕರೊನಾ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಯೋರ್ವ ಈ ಮದುವೆಯಲ್ಲಿ ಭಾಗವಹಿಸಿದ್ದೇ ಭಯಕ್ಕೆ ಕಾರಣವಾಗಿದೆ. ಈ 62 ಮಂದಿ ಸೋಂಕಿತನ ದ್ವಿತೀಯ ಸಂಪರ್ಕ ಎಂದು ಪರಿಗಣಿಸಿ ಕ್ವಾರಂಟೈನ್ ಮಾಡಲಾಗಿದೆ.
ಮಲೇಷಿಯಾದಿಂದ ಮೇ 22ರಂದು ಬೆಂಗಳೂರಿಗೆ ಬಂದಿದ್ದ ವೈದ್ಯರೋರ್ವರು ಸರ್ಕಾರಿ ಕ್ವಾರಂಟೈನ್ ಮುಗಿಸಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿ ಪರೀಕ್ಷೆ ಮಾಡಿಸಿದ ವೈದ್ಯನಲ್ಲಿ ಕರೊನಾ ಪಾಸಿಟಿವ್ ಕಂಡುಬಂದಿತ್ತು.
ಈ ವೈದ್ಯನ ಪ್ರಾಥಮಿಕ ಸಂಪರ್ಕಕ್ಕೆ ಬಂದ ವ್ಯಕ್ತಿ ಅರಂತೋಡು ಮದುವೆಯಲ್ಲಿ ಭಾಗವಹಿಸಿದ್ದ. ಅದೀಗ ಮದುವೆಯಲ್ಲಿ ಇದ್ದ ಎಲ್ಲರ ಆತಂಕಕ್ಕೆ ಕಾರಣವಾಗಿದೆ.