ಕಾಡಿನೊಳಕ್ಕೆ ಮನುಷ್ಯರಿಗೆ ನಿರ್ಬಂಧ, ವನ್ಯಜೀವಿಗಳು ಸುರಕ್ಷಿತ; ಹೆಚ್ಚಿದ ಕಳ್ಳಬೇಟೆ ದಂಧೆ

Safari 22 April 20
Published on

| ಗುರುಪ್ರಸಾದ್ ತುಂಬಸೋಗೆ, ಮೈಸೂರು

ಕರೊನಾ ಪರಿಸರದ ಮೇಲೆ ಕೆಲವು ಪೂರಕ ಪರಿಣಾಮಗಳನ್ನು ಬೀರಿದ್ದು, ಮನುಷ್ಯರ ಪ್ರವೇಶವಿಲ್ಲದೆ ವನ್ಯಜೀವಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಆದರೆ ಕಳ್ಳಬೇಟೆಯಿಂದ ಕಾಡಾನೆ-ಹಂದಿಗಳ ಸಾವಿನ ಸರಣಿ ಭೀತಿ ಹುಟ್ಟಿಸಿವೆ.

ಭದ್ರಾ ಅರಣ್ಯದ ಹಿನ್ನೀರು ಪ್ರದೇಶದಲ್ಲಿ 19 ದಿನಗಳಲ್ಲಿ 13ಕ್ಕೂ ಹೆಚ್ಚು ಕಾಡುಹಂದಿಗಳು, 1 ಕಾಡುಕೋಣ ಮೃತಪಟ್ಟಿದೆ. ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿ ಧಾಮದಲ್ಲಿ 15-20 ದಿನಗಳಲ್ಲಿ 7 ಆನೆಗಳು ಮೃತಪಟ್ಟಿರುವುದು ಅರಣ್ಯ ಇಲಾಖೆಗೆ ತಲೆನೋವು ತಂದಿದೆ. ಕೆಲವು ಆನೆಗಳು ಆಹಾರ-ನೀರು ಹುಡುಕಾಡುವ ಸಂದರ್ಭ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬೇಟೆಗಾರರ ಪತ್ತೆಗೆ ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ.

ಸಾಮಾನ್ಯವಾಗಿ ಮಾರ್ಚ್ - ಏಪ್ರಿಲ್​ನಲ್ಲಿ ಬಂಡೀಪುರ, ನಾಗರಹೊಳೆ, ಬಿಆರ್​ಟಿ ಅರಣ್ಯಗಳಲ್ಲಿ ಬೆಂಕಿಯ ಭಯ ಕಾಡುತ್ತದೆ. ಲಾಕ್​ಡೌನ್ ಅವಧಿಯಲ್ಲಿ ಹೆಚ್ಚಿನ ಜನರ ಪ್ರವೇಶ ವಿಲ್ಲದ್ದರಿಂದ ಬೆಂಕಿ ಅನಾಹುತ ನಡೆದಿಲ್ಲ. ಜತೆಗೆ ಇತ್ತೀಚೆಗೆ ಮಳೆ ಬಿದ್ದ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳು ನಳನಳಿಸುತ್ತಿವೆ.

ಹುಲಿ ಉಪಟಳ

ನಾಗರಹೊಳೆ ಕಾಡಂಚಿನ ಶ್ರೀಮಂಗಲ ಭಾಗದಲ್ಲಿ ಹುಲಿ ಉಪಟಳ ಹೆಚ್ಚಾಗಿದ್ದು, ಜಾನುವಾರುಗಳನ್ನು ಬಲಿ ತೆಗೆದು ಕೊಳ್ಳುತ್ತಿದೆ. ಬಂಡೀಪುರದ ಕಾಡಂಚಿನ ಕುಂದಕೆರೆ ವಲಯ ದಲ್ಲೂ ಹುಲಿಯೊಂದು ಜಾನುವಾರುಗಳನ್ನು ತಿಂದಿದ್ದು, ಅದರ ಸೆರೆಗೆ ಕೂಂಬಿಗ್ ನಡೆಸಲಾಗುತ್ತಿದೆ. ಅರಣ್ಯ ಸಿಬ್ಬಂದಿ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಕೆಲಸ ಮಾಡುವುದು ಸವಾಲಾಗಿದ್ದು, ರಜೆ ಹಾಕದೆ ಹೆಚ್ಚಿನ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ನಮ್ಮನ್ನೂ ಕರೊನಾ ವಾರಿಯರ್ಸ್​ನಂತೆ ‘ಗ್ರೀನ್ ವಾರಿಯರ್ಸ್’ ಎಂದು ಗುರುತಿಸಬೇಕು ಎಂಬುದು ಅರಣ್ಯ ಸಿಬ್ಬಂದಿ ಮನವಿ.

ಟಾಸ್ಕ್​ಫೋರ್ಸ್ ರಚನೆ

ವಿದೇಶದಲ್ಲಿ ಪ್ರಾಣಿಗಳಲ್ಲೂ ಕರೊನಾ ಕಾಣಿಸಿದ್ದರಿಂದ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅದರಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಣ ಸೂರು ಉಪವಿಭಾಗದ ಎಸಿಎಫ್ ನೇತೃತ್ವದಲ್ಲಿ ಟಾಸ್ಕ್​ಫೋರ್ಸ್ ರಚಿಸಲಾಗಿದೆ. ಬಂಡೀಪುರದ ರಾಂಪುರ, ನಾಗರಹೊಳೆಯ ಮತ್ತಿಗೋಡು, ದೊಡ್ಡಹರವೆ ಮತ್ತು ಬಳ್ಳೆ ಆನೆ ಶಿಬಿರಗಳಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗಿದೆ. ನಾಗರಹೊಳೆ ವ್ಯಾಪ್ತಿಯಲ್ಲಿ ಯಾವುದೇ ಪ್ರಾಣಿಗಳ ಮೇಲೆ ಚಲನವಲನದ ಮೇಲೆ ನಿಗಾ ಇಡಲು ಕ್ಯಾಮರಾ ಟ್ರ್ಯಾಪ್ ವಿಡಿಯೋ ಮೋಡ್​ನಲ್ಲಿ ಇಡಲಾಗಿದೆ.

ಉದ್ಯಾನವನದೊಳಗೆ ಕರೊನಾ ಪ್ರವೇಶಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೂಕ್ಷ್ಮಮತಿಗಳಾಗಿರುವ ವನ್ಯಜೀವಿಗಳ ಸಹಜ ಜೀವನಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿ ಸಾವಯವ ಔಷಧ ಸಿಂಪಡಿಸಲಾಗಿದೆ. ಕಳ್ಳಬೇಟೆ ತಡೆ ಶಿಬಿರದಲ್ಲಿರುವ ಎಲ್ಲ ಅರಣ್ಯ ಸಿಬ್ಬಂದಿಗೂ ಅಗತ್ಯ ಆಹಾರ ಪದಾರ್ಥ ಒದಗಿಸಲಾಗಿದೆ. ಮಾಸ್ಕ್-ಸ್ಯಾನಿಟೈಸರ್ ಕೂಡ ನೀಡಲಾಗಿದೆ. | ಮಹೇಶ್​ಕುಮಾರ್ ಡಿಸಿಎಫ್ ನಾಗರಹೊಳೆ

ಸೋಂಕು ನೀಗಿದಾಗಲೇ ಸಫಾರಿ

ಪ್ರಾಣಿಗಳಿಗೆ ಕರೊನಾ ಸೋಂಕು ಹರಡಿದರೆ ನಿಯಂತ್ರಣ ಅಸಾಧ್ಯ. ಆದ್ದರಿಂದ ಲಾಕ್​ಡೌನ್ ತೆರವುಗೊಳಿಸಿದ ತಕ್ಷಣ ಸಫಾರಿಯಂಥ ಪ್ರಕ್ರಿಯೆಗಳನ್ನು ನಡೆಸಬಾರದು. ಕರೊನಾ ಪೂರ್ಣ ಪ್ರಮಾಣದಲ್ಲಿ ತೊಲಗಿದ ಒಂದು ತಿಂಗಳ ನಂತರ ಪ್ರಾರಂಭಿಸುವುದು ಒಳ್ಳೆಯದು ಎಂಬುದು ಪರಿಸರಪ್ರಿಯರ ಒತ್ತಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net