ಎಪಿಎಲ್​ಗೂ ಪರಿಹಾರ: ಕರೊನಾದಿಂದ ಮೃತ ವ್ಯಕ್ತಿ ಕುಟುಂಬಕ್ಕೆ 1 ಲಕ್ಷ ರೂಪಾಯಿ

Front 2
ಕೋವಿಡ್​ನಿಂದ ಮೃತಪಟ್ಟ ಕುಟುಂಬದ ಮಹಿಳೆಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಪರಿಹಾರದ ಚೆಕ್ ವಿತರಿಸಿದರು. ಈ ವೇಳೆ ಸಚಿವರಾದ ಎಸ್.ಟಿ. ಸೋಮಶೇಖರ್, ಆರ್ ಅಶೋಕ್, ವಿ.ಸೋಮಣ್ಣ, ಶಾಸಕರಾದ ರವಿ ಸುಬ್ರಹ್ಮಣ್ಯ, ಆರ್. ಮಂಜುನಾಥ್, ಬೈರತಿ ಸುರೇಶ್, ಸತೀಶ್ ರೆಡ್ಡಿ, ಜಮೀರ್ ಅಹಮದ್ ಮತ್ತಿತರರಿದ್ದರು.
Published on

ಬೆಂಗಳೂರು: ರಾಜ್ಯದಲ್ಲಿ ಕೋವಿಡ್​ನಿಂದ ಮೃತಪಟ್ಟ ಎಪಿಎಲ್ ಕಾರ್ಡದಾರ ಕುಟುಂಬಕ್ಕೂ ತಲಾ 1 ಲಕ್ಷ ರೂ. ಪರಿಹಾರ ಕೊಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಮೃತ ವ್ಯಕ್ತಿಯ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ನೀಡುತ್ತಿದೆ. ಅದರೊಂದಿಗೆ ಬಿಪಿಎಲ್ ಕಾರ್ಡ್​ದಾರರಿಗೆ ರಾಜ್ಯ ಸರ್ಕಾರದಿಂದ ಪ್ರತ್ಯೇಕವಾಗಿ 1 ಲಕ್ಷ ರೂ. ನೀಡಲಾಗುತ್ತಿದೆ. ಇದಕ್ಕಾಗಿ 300 ಕೋಟಿ ರೂ ಮೀಸಲಿರಿಸಲಾಗಿದೆೆ. ಈಗ ಎಪಿಎಲ್ ಕಾರ್ಡ್​ದಾರರಿಗೂ ಪರಿಹಾರ ನೀಡಲು ಒತ್ತಡ ಬಂದಿರುವ ಹಿನ್ನೆಲೆಯಲ್ಲಿ, ಎಷ್ಟು ಫಲಾನುಭವಿಗಳಿದ್ದಾರೆ ಎಂದು ಪರಿಶೀಲಿಸಲಾಗುವುದು. ಆರ್ಥಿಕ ಹೊರೆಯ ಬಗ್ಗೆ ಸಮಾಲೋಚನೆ ನಡೆಸಿದ ಬಳಿಕ ಸಕಾರಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಪರಿಹಾರಕ್ಕೆ 25,116 ಅರ್ಜಿ ಸಲ್ಲಿಕೆ: ಕರೊನಾ ಪರಿಹಾರಕ್ಕೆ ಈವರೆಗೆ 25,116 ಅರ್ಜಿಗಳು ಬಂದಿವೆ. ಈ ಪೈಕಿ 12,250 ಮಂದಿ ಬಿಪಿಎಲ್ ಕಾರ್ಡ್​ದಾರ ಕುಟುಂಬಗಳಾಗಿದ್ದು, ಇದರಲ್ಲಿ 11,982 ಅರ್ಜಿದಾರರಿಗೆ ತಲಾ 1 ಲಕ್ಷ ರೂ. ಪರಿಹಾರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 14 ಸಾವಿರ ಜನರು ಕೋವಿಡ್​ನಿಂದ ಮೃತಪಟ್ಟಿದ್ದು 8,291 ಅರ್ಜಿಗಳು ಸಲ್ಲಿಕೆಯಾಗಿವೆ.

ಎಲ್ಲ ಅರ್ಜಿಗಳ ದಾಖಲೆ ಪರಿಶೀಲಿಸಿ ಶೀಘ್ರ ಪರಿಹಾರ ವಿತರಣೆ ಮಾಡಲಾಗುತ್ತದೆ. ಕೋವಿಡ್ ಪರಿಹಾರಕ್ಕೆ ಈಗಾಗಲೇ 57 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ವೇಳೆ ಮಧ್ಯವರ್ತಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ಮೂರನೇ ಅಲೆ ಎದುರಿಸಲು ಸಿದ್ಧ: ಕರೊನಾ ಸೋಂಕು ನಿಯಂತ್ರಣ ಮತ್ತು ಸೋಂಕಿತರ ಚಿಕಿತ್ಸೆಗೆ 25 ಸಾವಿರ ಸಾಮಾನ್ಯ ಹಾಸಿಗೆ, 9 ಸಾವಿರ ಆಮ್ಲಜನಕ ಹಾಗೂ 7 ಸಾವಿರ ಐಸಿಯು ಹಾಸಿಗೆ ಸಿದ್ಧಪಡಿಸಲಾಗಿದೆ. ಜತೆಗೆ, 4 ಸಾವಿರ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಹೀಗಾಗಿ, ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಉನ್ನತ ಮಟ್ಟಕ್ಕೆ ಏರಿಕೆಯಾಗಿದೆ. ಬೆಂಗಳೂರು ಸೇರಿ 30 ಜಿಲ್ಲೆಗಳಲ್ಲಿ ಆರ್​ಟಿ-ಪಿಸಿಆರ್ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net