

ನವದೆಹಲಿ: ದೇಶದಲ್ಲಿ ಕಳೆದ 10 ದಿನಗಳಿಂದಲೂ ನಿತ್ಯ 50 ಸಾವಿರಕ್ಕೂ ಹೆಚ್ಚು ಕೇಸ್ಗಳು ವರದಿಯಾಗುತ್ತಿವೆ. ಜತೆಗೆ, ಕರ್ನಾಟಕದಲ್ಲಿ 5 ಸಾವಿರಕ್ಕಿಂತ ಕಡಿಮೆ ಇಲ್ಲವೇ ಇಲ್ಲ ಎನ್ನುವಂತಾಗಿದೆ.
ಇದರ ನಡುವೆ, ಗಣಿತಶಾಸ್ತ್ರಜ್ಞರ ಲೆಕ್ಕಾಚಾರವೊಂದು ಭಾರಿ ಭರವಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕರೊನಾ ಸೋಂಕು ಯಾವ ಮಟ್ಟದಲ್ಲಿ ವ್ಯಾಪಿಸಲಿದೆ ಎಂಬುದಕ್ಕೆ ಹಲವು ಸೂತ್ರಗಳ ಆಧಾರದಲ್ಲಿ ಲೆಕ್ಕಾಚಾರ ಹಾಕಲಾಗುತ್ತಿದೆ.
ಸದ್ಯ ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ನ ಸೀತಾಭ್ರ ಸಿನ್ಹಾ ಹಾಗೂ ಸಂಶೋಧನಾ ತಂಡದ ಲೆಕ್ಕಾಚಾರದಂತೆ, ದೆಹಲಿ, ಮುಂಬೈ ಹಾಗೂ ಚೆನ್ನೈಯಲ್ಲಿ ಕರೊನಾದ ಅಂತ್ಯಕಾಲ ಆರಂಭವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ದೆಹಲಿಯಲ್ಲಿ ಸದ್ಯ ಆರ್- ವ್ಯಾಲ್ಯೂ ಅರ್ಥಾತ್ ರಿಪ್ರೊಡಕ್ಷನ್ ನಂಬರ್ ಶೇ.1ಕ್ಕಿಂತ ಕೆಳಗಿದೆ. ರಿಪ್ರೊಡಕ್ಷನ್ ಅಂದರೆ ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವ ಪ್ರಮಾಣ. ಕರೊನಾ ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಈ ಸಂಖ್ಯೆ ಇಷ್ಟೊಂದು ಕಡಿಮೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಅಂದರೆ, ಮೊದಲೆಲ್ಲ ಹೊಸ ಪ್ರಕರಣ ಪತ್ತೆಯಾದಾಗ ಅವರಿಂದ ಹತ್ತಾರು ಜನರಿಗೆ ಹಬ್ಬುತ್ತಿತ್ತು. ಈಗ ಆ ಪ್ರಮಾಣದ ಸರಾಸರಿ ಒಂದು ಅಥವಾ ಅದಕ್ಕಿಂತ ಕಡಿಮೆಯಾಗಿದೆ. ಇಂಥ ಫಲಿತಾಂಶ ಕಂಡು ಬಂದಿದೆ ಎಂದರೆ ಸಮುದಾಯದಲ್ಲಿ ಕರೊನಾ ಇಳಿಮುಖವಾಗುತ್ತಿದೆ ಎಂದೇ ಅರ್ಥ. ದೆಹಲಿಯಲ್ಲಂತೂ ಇದು ಹೆಚ್ಚು ನಿಚ್ಚಳವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ದೆಹಲಿಯಲ್ಲಿ ಸದ್ಯ 10,600 ಸಕ್ರಿಯ ಪ್ರಕರಣಗಳಿವೆ. ಸೆಪ್ಟಂಬರ್ ಮೊದಲ ವಾರದಲ್ಲಿ ಈ ಸಂಖ್ಯೆ 1,000ಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ. ಅದರಂತೆ, ದೆಹಲಿಯಲ್ಲಿ ಕಳೆದ ತಿಂಗಳು ಸೋಂಕಿತರ ಪ್ರಮಾಣಕ್ಕಿಂತ ಚೇತರಿಕೆ ಕಂಡವರ ಸಂಖ್ಯೆ ಹೆಚ್ಚಾಗಿತ್ತು. ದೆಹಲಿಯಲ್ಲಿ ನಿತ್ಯ ಹೆಚ್ಚು ಪರೀಕ್ಷೆ ನಡೆಸಿ ಸೋಂಕಿತರನ್ನು ಐಸೋಲೇಷನ್ನಲ್ಲಿ ಇರಿಸಿದ ಪರಿಣಾಮ ಮತ್ತಷ್ಟು ಜನರಿಗೆ ವ್ಯಾಪಿಸುವುದನ್ನು ತಡೆದಂತಾಗಿದೆ. ಇನ್ನು, ಮುಂಬೈನ ಕೊಳೆಗೇರಿ ಧಾರಾವಿಯಲ್ಲೂ ಕೂಡ ಇದು ಯಶಸ್ವಿಯಾಗಿದೆ. ಅಲ್ಲದೇ, ಇಲ್ಲಿನ ಕಾರ್ಯ ವಿಧಾನ ಮಾದರಿ ಎನಿಸಿಕೊಂಡಿದೆ.
ಸದ್ಯ ಆಂಧ್ರಪ್ರದೇಶದಲ್ಲಿ ಆರ್ ವ್ಯಾಲ್ಯೂ ಅತಿ ಹೆಚ್ಚಾಗಿದ್ದು, ಶೇ.1.48 ಅಂದರೆ ನೂರು ಜನರಿಂದ 148 ಜನರಿಗೆ ಸೋಂಕು ವ್ಯಾಪಿಸುತ್ತಿದೆ. ರಾಷ್ಟ್ರೀಯ ಸರಾಸರಿ ಶೇ.1.6 ಆಗಿದೆ. ಕರ್ನಾಟಕ, ಕೇರಳ, ಬಿಹಾರ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.
ಆರ್- ವ್ಯಾಲ್ಯೂ ಲೆಕ್ಕಾಚಾರ ಹಿಂದಿನ ಅಂಕಿ-ಅಂಶಗಳನ್ನು ಆಧರಿಸಿದ್ದೇ ಹೊರತು, ಮುನ್ಸೂಚನೆಯಲ್ಲ. ಕೆಲ ಗ್ರಹಿತ ಅಂಶಗಳ ಆಧಾರದಲ್ಲಿ ಇದನ್ನು ಕಂಡುಕೊಳ್ಳಲಾಗುತ್ತಿದ್ದು, ಕೆಲವೊಮ್ಮೆ ಅಚ್ಚರಿಯ ಫಲಿತಾಂಶಗಳು ಪ್ರಕಟಗೊಳ್ಳಬಹುದು ಎಂಬುದು ಸಂಶೋಧಕರ ಅಭಿಪ್ರಾಯ.