ಕಂದಮ್ಮಗಳನ್ನೂ ಬಿಡದ ಕರೊನಾ ಮಾರಿ: ಒಂದೇ ದಿನದಲ್ಲಿ ನಾಲ್ಕು ನಗರ ತತ್ತರ!

Corona Hotspor 3 May 20
Published on

ಬೆಂಗಳೂರು: ರಾಜ್ಯದಲ್ಲಿ ಇನ್ನೇನು ಕರೊನಾ ಸೋಂಕು ತಗ್ಗುತ್ತಿದೆ ಎಂದು ನಿಟ್ಟುಸಿರುಬಿಡುವಷ್ಟರಲ್ಲೇ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ 45 ಹೊಸ ಪ್ರಕರಣಗಳು ಬೆಳಕಿಗೆ ಬಂದು ಇನ್ನಷ್ಟು ಆತಂಕಕ್ಕೀಡು ಮಾಡಿದೆ. ಈ ಪೈಕಿ 24 ಮಂದಿ ಬಾಲಕಿಯರು ಹಾಗೂ ಮಹಿಳೆಯರಾಗಿದ್ದರೆ, 21 ಮಂದಿ ಬಾಲಕರು ಹಾಗೂ ಪುರುಷರು.

ಅದರಲ್ಲಿಯೂ ನಾಲ್ಕು ನಗರಗಳ ಸ್ಥಿತಿ ಅಯೋಮಯವಾಗಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನದವರೆಗೆ ಅಂದರೆ ಕೆಲವೇ ಗಂಟೆಗಳಲ್ಲಿ ದಾವಣಗೆರೆಯಲ್ಲಿ 14 ಪ್ರಕರಣಗಳು ಈ ಅವಧಿಯಲ್ಲಿ ದಾಖಲಾಗಿದ್ದರೆ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 12 ಪ್ರಕರಣ ದಾಖಲಾಗಿದೆ.

ಬೆಳಗಾವಿಯಲ್ಲಿ 11 , ಬೆಂಗಳೂರು ನಗರದಲ್ಲಿ 7 ಹೊಸ ಸೋಂಕಿತರನ್ನು ಪತ್ತೆ ಮಾಡಲಾಗಿದೆ. ಉಳಿದಂತೆ ಬಳ್ಳಾರಿಯಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ.

ಈ ಮೂಲಕ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 750ಕ್ಕೆ ಏರಿದೆ. ಈ ಪೈಕಿ 371 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ ಇಲ್ಲಿಯವರೆಗೆ ಮೃತಪಟ್ಟವರು 30 ಮಂದಿ.

ಮತ್ತೊಂದು ಆಘಾತಕಾರಿ ವರದಿ ಎಂದರೆ, ನಿನ್ನೆಯಿಂದ ಪತ್ತೆಯಾಗಿರುವವರ ಪೈಕಿ ಹೆಚ್ಚಿನವರು 40 ವರ್ಷಕ್ಕಿಂತ ಕಡಿಮೆ ವಯೋಮಾನದವರು. ದಾವಣಗೆರೆಯಲ್ಲಿ 3, 8, 11 ವರ್ಷದ ಮಕ್ಕಳಿಗೂ ಸೋಂಕು ತಗುಲಿದ್ದರೆ. ಭಟ್ಕಳದಲ್ಲಿ 5 ತಿಂಗಳ ಶಿಶು, 3 ಮತ್ತು 12 ವರ್ಷದ ಮಕ್ಕಳನ್ನೂ ಕರೊನಾ ಬಿಟ್ಟಿಲ್ಲ.

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net