

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಷ್ಟು ದಿನಗಳವರೆಗೆ ಹಸಿರು ವಲಯ ಎಂದು ಗುರುತಿಸಿಕೊಂಡಿದ್ದ ರಾಮನಗರಲ್ಲಿ ಒಂದು ಸೋಂಕು ಪ್ರಕರಣ ಪತ್ತೆಯಾಗಿದೆ. ಚೆನ್ನೈನಿಂದ ಬಂದಿರುವ ವ್ಯಕ್ತಿಯಲ್ಲಿ ಸೋಂಕು ಕಂಡಿದೆ.
ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗಿನ ವರದಿಯನ್ನು ನೋಡುವುದಾದರೆ 10 ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದೆ. ಇವರ ಪೈಕಿ ಹೆಚ್ಚಿನ ಮಕ್ಕಳು ಮಹಾರಾಷ್ಟ್ರದಿಂದ ಹಿಂದಿರುಗಿದವರು.
ಈ ಮೂಲಕ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2158ಕ್ಕೆ ಏರಿದೆ. ಈ ಪೈಕಿ 1433 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 680 ಮಂದಿ ಬಿಡುಗಡೆ ಹೊಂದಿದ್ದಾರೆ.
ನಿನ್ನೆ ಸಂಜೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 55 ವರ್ಷದ ಮಹಿಳೆ ವೈರಸ್ನಿಂದ ಮೃತಪಟ್ಟಿದ್ದಾರೆ. ಈವರೆಗೆ ಕರೊನಾ, 43 ಮಂದಿಯನ್ನು ರಾಜ್ಯದಲ್ಲಿ ಬಲಿ ಪಡೆದಿದೆ.
ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗೆ ಕಲಬುರಗಿಯಲ್ಲಿ 10 ಮಂದಿ, ಬೆಳಗಾವಿಯಲ್ಲಿ 9 ಮಂದಿ, ದಾವಣಗೆರೆಯಲ್ಲಿ 4, ಉತ್ತರ ಕನ್ನಡ, ಹಾವೇರಿ ಹಾಗೂ ವಿಜಯಪುರದಲ್ಲಿ ತಲಾ ಒಬ್ಬೊಬ್ಬರು... ಹೀಗೆ ಒಟ್ಟು 26 ಮಂದಿ ಸೋಂಕಿನಿಂದ ಗುಣಮುಖರಾಗಿ ಹೊರ ಬಂದಿದ್ದಾರೆ.
ಹೊಸ ಸೋಂಕಿನ ಪ್ರಕರಣ ಈ ರೀತಿ ಇದೆ: ಉಡುಪಿ 16, ಯಾದಗಿರಿ 15, ಕಲಬುರಗಿ 14, ಬೆಂಗಳೂರು ನಗರ 6, ಬಳ್ಳಾರಿ 3, ಧಾರವಾಡ 3, ದಕ್ಷಿಣ ಕನ್ನಡ 3, ಮಂಡ್ಯ 2, ಕೋಲಾರ 2, ಬೆಳಗಾವಿ 1, ಬೀದರ್ 1, ರಾಮನಗರ 1, ತುಮಕೂರು 1, ವಿಜಯಪುರ 1