

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗವನ್ನು ಕಾಡುತ್ತಿರುವ ಕಾಪಿರೈಟ್ ಕಿರಿಕ್ ಇದೀಗ ಕನ್ನಡ ರಂಗಭೂಮಿಗೂ ವಕ್ಕರಿಸಿಕೊಂಡಿದೆ ಎನ್ನಲಾಗುತ್ತಿದೆ. ಈ ಕುರಿತು ಖ್ಯಾತ ರಂಗಭೂಮಿ ಕಲಾವಿದರೇ ದನಿ ಎತ್ತಿದ್ದು, ಚರ್ಚೆಯ ವಿಷಯವಾಗಿ ಪರಿಣಮಿಸಲಾರಂಭಿಸಿದೆ.
ರಂಗಭೂಮಿ ಕಲಾವಿದ, ಚಿತ್ರನಟರೂ ಆಗಿರುವ ಮಂಡ್ಯ ರಮೇಶ್ ಈ ಕುರಿತು ದನಿ ಎತ್ತಿದ್ದು, ಅದಕ್ಕೀಗ ಸಮಾನಮನಸ್ಕ ರಂಗಾಸಕ್ತರು ದನಿಗೂಡಿಸಲು ಆರಂಭಿಸಿದ್ದಾರೆ. "ಕನ್ನಡ ರಂಗಭೂಮಿಗೆ ಆಘಾತ!, ಕಂಡು ಕೇಳರಿಯದ ಸಂಸ್ಥೆಯೊಂದು ಕೆಲ ಶ್ರೇಷ್ಠ ರಂಗಗೀತೆಗಳನ್ನು ಹಾಡಕೂಡದೆಂದು ಹಕ್ಕು ಸ್ವಾಮ್ಯದಡಿ ಫರ್ಮಾನು ಹೊರಡಿಸಿದೆ!" ಎಂಬುದಾಗಿ ಮಂಡ್ಯ ರಮೇಶ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಇದಕ್ಕೆ ಹಲವರು ಕಮೆಂಟ್ ಮಾಡುವ ಮೂಲಕ ಆ ಸಂಸ್ಥೆ ಯಾವುದು ಎಂದು ರಮೇಶ್ ಅವರನ್ನು ಪ್ರಶ್ನಿಸಿದ್ದಾರೆ. ದ ಇಂಡಿಯನ್ ಪರ್ಫಾರ್ಮಿಂಗ್ ರೈಟ್ ಸೊಸೈಟಿ ಲಿಮಿಟೆಡ್ (ಐಪಿಆರ್‌ಎಸ್) ಎಂಬುದಾಗಿ ರಿಪ್ಲೈ ಮಾಡುವ ಮೂಲಕ ಆ ಸಂಸ್ಥೆಯ ಹೆಸರನ್ನೂ ರಮೇಶ್ ಬಹಿರಂಗ ಪಡಿಸಿದ್ದಾರೆ.
'ಕಿರಿಕ್ ಪಾರ್ಟಿ', 'ಕಾಂತಾರ' ಮುಂತಾದ ಕನ್ನಡ ಸಿನಿಮಾಗಳಿಗೆ ಸಂಬಂಧಿಸಿದಂತೆ ಕಾಪಿರೈಟ್ ಕಿರಿಕ್ ಕಾಡಿದ್ದು ಹೊಸದೇನಲ್ಲ. ಅದೇ ರೀತಿಯ ಕ್ಲೇಮ್‌ಗಳು ಈಗ ನಾಟಕರಂಗಕ್ಕೂ ಪ್ರವೇಶ ಮಾಡಿದೆ ಎಂಬ ಸಂಗತಿಯ ಮೇಲೆ ರಮೇಶ್ ಬೆಳಕು ಚೆಲ್ಲಿದ್ದು, ನಾಟಕಾಸಕ್ತರು, ರಂಗಭೂಮಿ ಕಲಾವಿದರೂ ರಮೇಶ್‌ಗೆ ಬೆಂಬಲ ಸೂಚಿಸಿದ್ದಲ್ಲದೆ ಐಪಿಆರ್‌ಎಸ್ ಸಂಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.