

Jyoti Malhotra : ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಇತ್ತೀಚೆಗೆ ಬಂಧಿಸಲ್ಪಟ್ಟ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳ ವೈಯಕ್ತಿಕ ಡೈರಿಯನ್ನು ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ. ಆ ದಿನಚರಿಯಲ್ಲಿ ಆಕೆಯ ಆಲೋಚನೆಗಳು ಮತ್ತು ಪ್ರಯಾಣದ ಬಗ್ಗೆ ವಿವರವಾಗಿ ಬರೆಯಲಾಗಿದ್ದು, ಅವುಗಳಲ್ಲಿ ಕೆಲವು ಬರಹಗಳು ಗಡಿಯಾಚೆಗಿನ ಸಂಪರ್ಕವನ್ನು ಬಹಿರಂಗಪಡಿಸಿವೆ.
ತನಿಖಾಧಿಕಾರಿಗಳು ಉತ್ತರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನ ಸಂಬಂಧಿತ ಗೂಢಚಾರ ಜಾಲದತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಕಳೆದ ಎರಡು ವಾರಗಳಲ್ಲಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟ 11 ಜನರಲ್ಲಿ 33 ವರ್ಷದ ಜ್ಯೋತಿ ಮಲ್ಹೋತ್ರಾ ಕೂಡ ಒಬ್ಬರು. 'ಟ್ರಾವೆಲ್ ವಿತ್ ಜೆಒ' ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಜ್ಯೋತಿಯನ್ನು ಮೇ 16 ರಂದು ಹರಿಯಾಣದ ಹಿಸಾರ್‌ನಲ್ಲಿರುವ ನ್ಯೂ ಅಗರ್‌ಸೈನ್ ಎಕ್ಸ್‌ಟೆನ್ಶನ್‌ನಿಂದ ಬಂಧಿಸಲಾಯಿತು.
ಪೊಲೀಸ್ ಮೂಲಗಳ ಪ್ರಕಾರ, ಜ್ಯೋತಿ ಮಲ್ಹೋತ್ರಾ ತಮ್ಮ ಅನುಭವಗಳನ್ನು ಡೈರಿಯಲ್ಲಿ ದಾಖಲಿಸುತ್ತಿದ್ದರು. ಆಗಾಗ ಅಂತಾರಾಷ್ಟ್ರೀಯ ಪ್ರವಾಸಗಳಿಗೆ ತೆರಳುತ್ತಿದ್ದ ಜ್ಯೋತಿ, ತಮ್ಮೊಂದಿಗೆ ದಿನಚರಿಯನ್ನು ಸಹ ಒಯ್ಯುತ್ತಿದ್ದಳು. ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ತಮ್ಮ ಅನುಭವಗಳನ್ನು ಬರೆಯುತ್ತಿದ್ದಳು. ಇದೇ ಡೈರಿಯು ಆಕೆಯ ಅಂತಾರಾಷ್ಟ್ರೀಯ ಸಂಪರ್ಕ ಮತ್ತು ಶಂಕಿತ ಚಟುವಟಿಕೆಗಳ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಒದಗಿಸಬಹುದು ಎಂದು ತನಿಖಾಧಿಕಾರಿಗಳು ನಂಬಿದ್ದಾರೆ.
ಸುಮಾರು 10 ರಿಂದ 11 ಪುಟಗಳಷ್ಟು ಉದ್ದವಿರುವ ಈ ದಿನಚರಿಯಲ್ಲಿ ಇಂಗ್ಲಿಷ್ನಲ್ಲಿ ಎಂಟು ಪುಟಗಳ ಸಾಮಾನ್ಯ ಪ್ರಯಾಣ ಟಿಪ್ಪಣಿಗಳು ಮತ್ತು ಹಿಂದಿಯಲ್ಲಿ ಮೂರು ಪುಟಗಳ ಟಿಪ್ಪಣಿಯನ್ನು ಪಾಕಿಸ್ತಾನವನ್ನು ಕೇಂದ್ರೀಕರಿಸಿ ಬರೆಯಲಾಗಿದೆ. ಪಾಕಿಸ್ತಾನ ಪ್ರವಾಸದಿಂದ ಹಿಂತಿರುಗಿದ ನಂತರ ಜ್ಯೋತಿ, ಹಿಂದಿಯಲ್ಲಿ ಬರೆದಿದ್ದಾಳೆ. ಅದರಲ್ಲಿ ಪಾಕಿಸ್ತಾನದ ಮೂಲಕ 10 ದಿನಗಳ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ, ಇಂದು ನಾನು ನನ್ನ ದೇಶ ಭಾರತಕ್ಕೆ ಮರಳುತ್ತೇನೆ. ಗಡಿಗಳ ಅಂತರ ಎಷ್ಟು ಕಾಲ ಉಳಿಯುತ್ತದೆ ಎಂದು ನಮಗೆ ತಿಳಿದಿಲ್ಲ, ಆದರೆ ಹೃದಯಗಳ ನಡುವಿನ ಕುಂದುಕೊರತೆಗಳು ಮಾಯವಾಗಲಿ. ನಾವೆಲ್ಲರೂ ಒಂದೇ ಭೂಮಿ, ಒಂದೇ ಮಣ್ಣಿಗೆ ಸೇರಿದವರು ಎಂದು ಜ್ಯೋತಿ ಬರೆದುಕೊಂಡಿದ್ದಾಳೆ.
ಜ್ಯೋತಿ ತನ್ನ ದಿನಚರಿಯಲ್ಲಿ ಪಾಕಿಸ್ತಾನದಲ್ಲಿ ತನಗೆ ದೊರೆತ ಆತಿಥ್ಯವನ್ನು ಶ್ಲಾಘಿಸಿದ್ದಾಳೆ ಮತ್ತು ಹೆಚ್ಚಿನ ಭಾರತೀಯ ಹಿಂದೂಗಳು ತಮ್ಮ ಪೂರ್ವಜರ ಸ್ಥಳಗಳಿಗೆ ಭೇಟಿ ನೀಡಬಹುದೆಂದು ಹೇಳಿದ್ದಾಳೆ. ದೇವಾಲಯಗಳು ಮತ್ತು ಗುರುದ್ವಾರಗಳು ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಸುಲಭವಾಗಿ ಪ್ರವೇಶಿಸುವ ಬಯಕೆ ಮತ್ತು 1947ರ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಕುಟುಂಬಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸುವ ಬಯಕೆಯ ಬಗ್ಗೆಯೂ ಜ್ಯೋತಿ ಬರೆದಿದ್ದಾಳೆ.
ಇನ್ನು ಪೊಲೀಸರು ವಿಶೇಷವಾಗಿ ಜ್ಯೋತಿ ಅವರ ಕಾಶ್ಮೀರ ಪ್ರವಾಸದ ವಿಡಿಯೋಗಳನ್ನು ಪರಿಶೀಲಿಸುತ್ತಿದ್ದಾರೆ. ಜ್ಯೋತಿ, ಒಡಿಶಾದ ಪುರಿ ಮೂಲದ ಪ್ರಿಯಾಂಕಾ ಸೇತುಪತಿ ಅವರೊಂದಿಗೆ ಆಗಾಗ ಕಾಶ್ಮೀರಕ್ಕೆ ಹೋಗುತ್ತಿದ್ದರು. ಜ್ಯೋತಿ ಮಲ್ಹೋತ್ರಾ ಅವರ ಚಟುವಟಿಕೆಗಳ ಬಗ್ಗೆ ಹಾಗೂ ಉಗ್ರರ ದಾಳಿಯ ಹಿಂದಿನ ಅವರ ಕೈವಾಡದ ಬಗ್ಗೆ ತನಿಖಾ ಸಂಸ್ಥೆಗಳು ಈಗಾಗಲೇ ಪ್ರಿಯಾಂಕಾ ಸೇತುಪತಿಯನ್ನು ಪ್ರಶ್ನಿಸಿವೆ.
ತನಿಖಾಧಿಕಾರಿಗಳ ಪ್ರಕಾರ, ಮಲ್ಹೋತ್ರಾ ಆಗಾಗ ತಡರಾತ್ರಿಯವರೆಗೂ ಕೆಲಸ ಮಾಡುತ್ತಿದ್ದಳು. ರಾತ್ರಿ 1 ಗಂಟೆಯವರೆಗೂ ವಿಡಿಯೋಗಳನ್ನು ಎಡಿಟ್ ಮಾಡುತ್ತಿದ್ದಳು ಮತ್ತು ಅಪ್‌ಲೋಡ್ ಮಾಡುತ್ತಿದ್ದಳು. ದೆಹಲಿಗೆ ಪ್ರಯಾಣಿಸುತ್ತಿರುವುದಾಗಿ ತಮ್ಮ ಕುಟುಂಬಕ್ಕೆ ತಿಳಿಸುತ್ತಿದ್ದಳು ಆದರೆ, ವಾಸ್ತವವಾಗಿ ಆಕೆ ಬೇರೆಡೆಗೆ ಹೋಗುತ್ತಿದ್ದಳು ಎಂದು ವರದಿಯಾಗಿದೆ. ಆಕೆಯ ಸಾಮಾಜಿಕ ಜಾಲತಾಣದ ಒಂದು ವ್ಲಾಗ್‌ನಲ್ಲಿ ದುಬಾರಿ ಬಾಲಿ ಪ್ರವಾಸ ಅಪ್‌ಲೋಡ್ ಆಗಿದ್ದು, ಆಕೆಯ ಐಷಾರಾಮಿ ಜೀವನಶೈಲಿಯ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಆಕೆಯ ಬಂಧನದ ನಂತರ, ಆಕೆಯ ಕುಟುಂಬವು ಆಕೆಯ ಎಲ್ಲಾ ಫೋಟೋಗಳನ್ನು ಮನೆಯಿಂದ ತೆಗೆದುಹಾಕಿದೆ. ಆಕೆಯ ತಂದೆ ತೀವ್ರ ಖಿನ್ನತೆಗೆ ಒಳಗಾಗಿದ್ದು, ಪ್ರಕರಣದಿಂದ ದೂರ ಉಳಿದಿದ್ದಾರೆ. ಇತ್ತ ಜ್ಯೋತಿ ಮಲ್ಹೋತ್ರಾ ಪ್ರಸ್ತುತ ಐದು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದು, ಅವರನ್ನು NIA, ಗುಪ್ತಚರ ಬ್ಯೂರೋ ಮತ್ತು ಹರಿಯಾಣ ಪೊಲೀಸರ ಜಂಟಿ ತಂಡ ವಿಚಾರಣೆ ನಡೆಸುತ್ತಿದೆ. ಅಧಿಕಾರಿಗಳು ಆಕೆಯ ಹಣಕಾಸಿನ ವಹಿವಾಟುಗಳು ಮತ್ತು ಪ್ರಯಾಣ ಇತಿಹಾಸವನ್ನು ಸಹ ಪರಿಶೀಲಿಸುತ್ತಿದ್ದಾರೆ. ಆಕೆಯ ದಿನಚರಿಯು ಆಕೆಯ ಉದ್ದೇಶಗಳು, ಸಂಪರ್ಕಗಳು ಮತ್ತು ಆಕೆಯ ಆಪಾದಿತ ಬೇಹುಗಾರಿಕೆ ಚಟುವಟಿಕೆಗಳ ವ್ಯಾಪ್ತಿಯನ್ನು ಬಹಿರಂಗಪಡಿಸಬಹುದು ಎಂದು ಪೊಲೀಸರು ನಂಬಿದ್ದಾರೆ.
ಈ ಬಗ್ಗೆ ಹಿಸಾರ್‌ನಲ್ಲಿರುವ ಹಿರಿಯ ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದು. ಕೇಂದ್ರೀಯ ಸಂಸ್ಥೆಗಳು ಮತ್ತು ಮಿಲಿಟರಿ ಗುಪ್ತಚರ ಸಂಸ್ಥೆಗಳು ಜ್ಯೋತಿಯ ಪ್ರಯಾಣದ ವಿವರಗಳನ್ನು ಪರಿಶೀಲಿಸುತ್ತಿವೆ ಎಂದು ದೃಢಪಡಿಸಿದ್ದಾರೆ. ಆಕೆ ಪಾಕಿಸ್ತಾನ, ಚೀನಾ ಮತ್ತು ಇತರ ದೇಶಗಳಿಗೆ ಭೇಟಿ ನೀಡಿರುವುದಾಗಿ ತಿಳಿದುಬಂದಿದೆ. ಆಕೆಯ ವಿದೇಶಿ ಭೇಟಿಗಳ ಸಂಪೂರ್ಣ ಸಮಯವನ್ನು ಪುನರ್ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.
ಹಿಸಾರ್ ಎಸ್ಪಿ ಶಶಾಂಕ್ ಕುಮಾರ್ ಸಾವನ್ ಮಾತನಾಡಿ, ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳು ಜ್ಯೋತಿಯನ್ನು ತಮ್ಮ ಆಸ್ತಿಯಾಗಿ "ಬೆಳೆಸುತ್ತಿದ್ದರು ಎಂದು ಹೇಳಿದ್ದಾರೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನಾಲ್ಕು ದಿನಗಳ ಮಿಲಿಟರಿ ಬಿಕ್ಕಟ್ಟಿನ ಸಮಯದಲ್ಲಿ ಜ್ಯೋತಿ, ದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ನಿಯೋಜಿಸಲಾದ ಪಾಕಿಸ್ತಾನಿ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಆರೋಪಿಸಲಾಗಿದೆ. ಜ್ಯೋತಿಗೆ ಮಿಲಿಟರಿ ಕಾರ್ಯಾಚರಣೆಗಳಲ್ಲಿ ನೇರ ಸಂಬಂಧ ಇಲ್ಲ ಎಂದು ನಂಬಲಾಗಿದ್ದರೂ, ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರೊಂದಿಗೆ (ಪಿಐಒ) ಸಂವಹನ ನಡೆಸುತ್ತಿದ್ದರು. ಪಹಲ್ಗಾಮ್ ದಾಳಿಯ ಮೊದಲು ಜ್ಯೋತಿ, ಕಾಶ್ಮೀರಕ್ಕೆ ಭೇಟಿ ನೀಡಿದ್ದರು ಮತ್ತು ಅದಕ್ಕೂ ಮೊದಲು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದರು ಮತ್ತು ಅಧಿಕಾರಿಗಳು ಈ ಪ್ರವಾಸಗಳ ನಡುವೆ ಸಂಭವನೀಯ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಾವನ್ ಹೇಳಿದರು.
ಅಂದಹಾಗೆ, 4 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಜ್ಯೋತಿ ಮಲ್ಹೋತ್ರಾ, 2023ರಲ್ಲಿ ಪಾಕಿಸ್ತಾನ ಹೈಕಮಿಷನ್‌ನಲ್ಲಿ ವೀಸಾಕ್ಕಾಗಿ ಅರ್ಜಿ ಸಲ್ಲಿಸುವಾಗ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರನ್ನು ಸಂಪರ್ಕಿಸಿದರು. ಮೇ 13 ರಂದು, ಬೇಹುಗಾರಿಕೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಭಾರತ ಎಹ್ಸಾನ್ ಅವರನ್ನು ಸಹ ಹೊರಹಾಕಿದೆ. (ಏಜೆನ್ಸೀಸ್)