ಹಗಲು ಪೊಲೀಸ್‍, ರಾತ್ರಿ ಶಿಕ್ಷಕ- ಇದು ಸ್ಟೇಷನ್ ಹೌಸ್ ಆಫೀಸರ್ ಒಬ್ಬರ ಬದುಕಿನ ಕಥೆ!

cop-kid
Published on

ಇಂದೋರ್: ಆತ ಹನ್ನೆರಡು ವರ್ಷದ ಬಾಲಕ. ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆ. ಹೆಸರು ರಾಜ್. ಆತನ ತಂದೆ ಕೂಲಿ ಕಾರ್ಮಿಕ, ಅಜ್ಜ ಬೀದಿಬದಿ ವ್ಯಾಪಾರಿ. ಅಪರಾಧ ಚಟುವಟಿಕೆಗಳು ಹೆಚ್ಚಾಗಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ. ದುಡ್ಡುಕೊಟ್ಟು ಟ್ಯೂಷನ್‍ ಪಡೆಯುವಷ್ಟು ಹಣಕಾಸಿನ ಸ್ಥಿತಿ ಇಲ್ಲ. ಆಗ ಆತನ ಕಣ್ಣಿಗೆ ಬಿದ್ದವರು ಈ ಪೊಲೀಸ್ ಅಧಿಕಾರಿ ವಿನೋದ್ ದೀಕ್ಷಿತ್‍.

ಪಲಾಸಿಯಾದಲ್ಲಿ ಸ್ಟೇಷನ್ ಹೌಸ್ ಆಫೀಸರ್ ಆಗಿರುವ ವಿನೋದ್ ದೀಕ್ಷಿತ್‍ ಆ ಠಾಣೆಯ ವ್ಯಾಪ್ತಿಯ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿರಬೇಕಾದರೆ ರಾಜ್ ನೇರವಾಗಿ ಅವರ ಬಳಿ ಬಂದು ತನ್ನಾಸೆಯನ್ನು ಕೇಳಿಕೊಳ್ಳುತ್ತಾನೆ. ಅದಕ್ಕೆ ಒಪ್ಪಿಗೆ ಸೂಚಿಸಿದ ದೀಕ್ಷಿತ್, ಲಾಕ್‍ಡೌನ್ ಅವಧಿಯಲ್ಲಿ ರಾತ್ರಿ ಹೊತ್ತು ಬಾಲಕ ರಾಜ್‍ಗೆ ಟ್ಯೂಷನ್ ಆರಂಭಿಸುತ್ತಾರೆ. ಗಣಿತ ಮತ್ತು ಇಂಗ್ಲಿಷ್ ಭಾಷೆಯ ಟ್ಯೂಷನ್ ಗೆ ರಾಜ್‍ಗೆ ದೀಕ್ಷಿತ್ ಗುರುವಾಗುತ್ತಾರೆ.

ಬಾಲಕ ರಾಜ್‍ ಹೇಳಿದ್ದಿಷ್ಟು- ಲಾಕ್‍ಡೌನ್ ಅವಧಿಯಲ್ಲಿ ಪೊಲೀಸರ ಕೆಲಸ ನೋಡಿ ಪ್ರೇರಿತನಾಗಿದ್ದೇನೆ. ನಾನೂ ಪೊಲೀಸ್ ಅಧಿಕಾರಿ ಆಗಬೇಕೆಂಬ ಆಸೆಯಾಗಿದೆ. ಅದಕ್ಕೆ ದೀಕ್ಷಿತ್ ಸರ್ ಅವರನ್ನು ಭೇಟಿ ಮಾಡಿ ಮನದಾಸೆ ತೋಡಿಕೊಂಡೆ. ಅವರೂ ಒಪ್ಪಿಕೊಂಡು ಚೆನ್ನಾಗಿ ಹೇಳಿಕೊಡ್ತಿದ್ದಾರೆ. ನನ್ನ ಕನಸನ್ನು ಈಡೇರಿಸಿಕೊಳ್ಳುವ ಭರವಸೆ ಮೂಡಿದೆ.

ದೀಕ್ಷಿತ್ ಅವರು ಹೇಳಿದ್ದಿಷ್ಟು- ಇತರೆ ಪೊಲೀಸ್ ಅಧಿಕಾರಿಗಳು ತಮ್ಮ ಕೆಲಸದ ಅವಧಿಯ ನಂತರದಲ್ಲಿ ಸಮಾಜಕ್ಕೆ ಒಳಿತಾಗುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ನಾನೂ ಈ ರೀತಿಯಾಗಿ ನನ್ನ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದೇನೆ. ಈ ರೀತಿ ಟ್ಯೂಷನ್ ಕೊಡುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೆಲವು ಬಾಲಕರಿಗೆ ಪಾಠ ಮಾಡಿದ್ದೇನೆ. ರಾಜ್‍ ಗೆ ಇಲ್ಲೇ ಎಟಿಎಂ ಬಳಿಯೋ ಅಥವಾ ನನ್ನ ಜೀಪಿನ ಬಾನೆಟ್ ಹತ್ತಿರ ನಿಂತೋ ಪಾಠ ಹೇಳುತ್ತೇನೆ. ಅವನೂ ಖುಷಿಯಿಂದ ಕಲಿಯುತ್ತಿದ್ಧಾನೆ.

ಈ ವಿದ್ಯಮಾನ ಈಗ ಜಗತ್ತಿನ ಗಮನಸೆಳೆದಿದ್ದು, ಎಲ್ಲರೂ ಪೊಲೀಸ್ ಅಧಿಕಾರಿ ಮತ್ತು ಬಾಲಕನಿಗೆ ಶುಭಹಾರೈಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net