

ಜೈಪುರ: ರಾಜಸ್ಥಾನ ಕಾಂಗ್ರೆಸ್ ಎರಡು ಬಣವಾಗಿ ಬೇರ್ಪಟ್ಟಿದೆ. ಒಂದು ಬಣ ಸಿಎಂ ಅಶೋಕ್ ಗೆಹ್ಲೋಟ್ರದ್ದು, ಮತ್ತೊಂದು ಮಾಜಿ ಡಿಸಿಎಂ ಸಚಿನ್ ಪೈಲಟ್ ಅವರದ್ದು. ಒಂದು ಕಡೆ ಸಚಿನ್ ಪೈಲಟ್ ಅವರ ಬಣ ಅನರ್ಹತೆಯ ಭೀತಿ ಎದುರಿಸುತ್ತ, ಕಾನೂನು ಹೋರಾಟದಲ್ಲಿ ತೊಡಗಿಕೊಂಡಿದ್ದರೆ, ಅಶೋಕ್ ಗೆಹ್ಲೋಟ್ ಬಣ ಐಷಾರಾಮಿ ಹೋಟೆಲ್ನಲ್ಲಿ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದೆ. ಸಂಭ್ರಮದಲ್ಲಿದೆ.
ಸದ್ಯ ಅಶೋಕ್ ಗೆಹ್ಲೋಟ್ ಬಣಕ್ಕೆ ಬಿಜೆಪಿ ಭಯ ಎದುರಾಗಿದೆ. ಹೇಗೂ ಕಾಂಗ್ರೆಸ್ ಎರಡು ಭಾಗವಾಗಿದೆ, ಇದೇ ಸಮಯದಲ್ಲಿ ಬಿಜೆಪಿ ಶಾಸಕರ ಕುದುರೆ ವ್ಯಾಪಾರ ನಡೆಸಬಹುದು ಎಂಬ ಆತಂಕದಿಂದ ಎಲ್ಲರೂ ಜೈಪುರದಲ್ಲಿರುವ ಐಷಾರಾಮಿ ಫೇರ್ಮಾಂಟ್ ಹೋಟೆಲ್ನಲ್ಲಿ ಅಡಗಿದ್ದಾರೆ. ಹಾಗೇ ಫೈವ್ ಸ್ಟಾರ್ ಹೋಟೆಲ್ ಸೇರಿದವರು, ಪಾಕಶಾಲೆಯ ಪ್ರಯೋಗಗಳನ್ನು ಕಲಿಯುತ್ತಿದ್ದಾರೆ.
ಯೋಗಾಭ್ಯಾಸ ಮಾಡುತ್ತ, ಸಿನಿಮಾ ನೋಡುತ್ತ ಭರ್ಜರಿ ಮನರಂಜನೆ ಮೂಡ್ನಲ್ಲಿದ್ದಾರೆ. ಅವರ ಫೋಟೋಗಳೂ ವೈರಲ್ ಆಗಿವೆ.
ಕೆಲವರು ಹೋಟೆಲ್ನ ಚೆಫ್ರಿಂದಲೇ ಅಡುಗೆ ಕಲಿಯುತ್ತಿದ್ದಾರೆ. ಪಾಸ್ತಾ ಸೇರಿ, ವಿವಿಧ ಅಡುಗೆಗಳನ್ನು ಮಾಡುವುದನ್ನು ಕಲಿಯುತ್ತಿದ್ದಾರೆ. ಹಾಗೇ ಮತ್ತೊಂದಷ್ಟು ಜನ ಹೋಟೆಲ್ ಆವರಣದ ಹಸಿರು ಹುಲ್ಲಿನಲ್ಲಿ ಯೋಗಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಯಾವುದೇ ಸೋಷಿಯಲ್ ಡಿಸ್ಟನ್ಸ್ ಇಲ್ಲದೆ, ಮಾಸ್ಕ್ ಕೂಡ ಧರಿಸದೆ ಬಿಂದಾಸ್ ಆಗಿ ಮಜಾ ಮಾಡುತ್ತಿದ್ದಾರೆ. ಈ ಮಧ್ಯೆ ಒಂದಷ್ಟು ಜನ ಶಾಸಕರು ಬಾಲಿವುಡ್ ಸಿನಿಮಾ ನೋಡುವುದರಲ್ಲಿ ಬಿಜಿಯಾಗಿದ್ದಾರೆ. ಇದನ್ನೂ ಓದಿ: ಪತಂಜಲಿ ಕರೊನಾ ಔಷಧಕ್ಕೆ ಮತ್ತೊಂದು ಸಂಕಟ, ಬ್ರ್ಯಾಂಡ್ ನೇಮ್ ಬಳಕೆಗೆ ಹೈಕೋರ್ಟ್ ತಡೆ
ಹೊರಗೆಲ್ಲ ಕರೊನಾ ಭೀತಿಯಿಂದ ಜನಸಾಮಾನ್ಯರೆಲ್ಲ ಆತಂಕದಲ್ಲಿದ್ದಾರೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಪರಿಸಥೀತಿ ನಿಭಾಯಿಸಬೇಕಾದ ಜನಪ್ರತಿನಿಧಿಗಳು ಹೋಟೆಲ್ ಸೇರಿ, ಐಷಾರಾಮಿ ಜೀವನ ನಡೆಸುತ್ತಿರುವುದು ಎಷ್ಟು ಸರಿ ಎಂದು ಅಲ್ಲಿನ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)