ತೀವ್ರ ಟೀಕೆಗೊಳಗಾದ ಪೊಲೀಸ್ ಕಾಯ್ದೆ ತಿದ್ದುಪಡಿ ಹಿಂತೆಗೆದುಕೊಂಡ ಕೇರಳ ಸರ್ಕಾರ

Pinarayi Vijayan
Published on

ಕೊಚ್ಚಿ: ಕಟು ಟೀಕೆಗಳನ್ನು ಎದುರಿಸಿದ ಕೇರಳ ಪೊಲೀಸ್ ಕಾಯ್ದೆ ತಿದ್ದುಪಡಿಯನ್ನು ಕೇರಳ ಸರ್ಕಾರ ಸೋಮವಾರ ಹಿಂತೆಗೆದುಕೊಂಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಸೋಮವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ. ಎಲ್​ಡಿಎಫ್ ಬೆಂಬಲಿಗರು ವ್ಯಕ್ತಪಡಿಸಿದ ಕಾಳಜಿಯನ್ನು ಪರಿಗಣಿಸಿದ ಸರ್ಕಾರ, ಕಾಯ್ದೆ ತಿದ್ದುಪಡಿ ಕ್ರಮವನ್ನು ಹಿಂಪಡೆದಿದೆ ಎಂದು ಸಿಎಂ ವಿಜಯನ್ ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಕಾಯ್ದೆ ತಿದ್ದುಪಡಿಯನ್ನು ಸರ್ಕಾರ ಪ್ರಕಟಿಸಿದಾಗ ವಿವಿಧ ರೀತಿಯ ಪ್ರತಿಕ್ರಿಯೆಗಳು ಲಭ್ಯವಾಗಿವೆ. ವಿವಿಧ ದೃಷ್ಟಿಕೋನಗಳ ನಿಲುವು ಕಂಡುಬಂದಿದೆ. ಎಲ್​ಡಿಎಫ್​ ಬೆಂಬಲಿಗರು ತೋರಿಸಿದ ಕಾಳಜಿ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತವರ ನಿಲುವನ್ನು ಸರ್ಕಾರ ಗೌರವಿಸುತ್ತದೆ. ಈ ಪರಿಸ್ಥಿತಿಯಲ್ಲಿ ಕಾಯ್ದೆ ತಿದ್ದುಪಡಿ ಸರಿ ಅಲ್ಲ ಎಂಬುದು ಸರ್ಕಾರಕ್ಕೂ ಮನವರಿಕೆಯಾಗಿದೆ ಎಂದು ಸಿಎಂ ವಿಜಯನ್ ತಿಳಿಸಿದ್ದಾರೆ.

ಈ ಕುರಿತು ವಿಧಾನಸಭೆಯಲ್ಲಿ ವಿಸ್ತೃತವಾದ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಎಲ್ಲ ಪಕ್ಷಗಳ ದೃಷ್ಟಿಕೋನಗಳು, ಅಭಿಪ್ರಾಯಗಳನ್ನೂ ಸ್ವೀಕರಿಸಿ ಸರ್ಕಾರ ಒಂದು ತೀರ್ಮಾನಕ್ಕೆ ಬರಲಿದೆ ಎಂದು ಅವರು ಸ್ಪಷ್ಟಪಡಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net