

ಸಾಗರ: ಯಾವುದೇ ಕೆಲಸದಲ್ಲಿ ನಿರಂತರತೆ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ನಮ್ಮ ಕನಸುಗಳು ಯಶಸ್ವಿಯಾಗಬೇಕು ಎಂದರೆ ಅದಕ್ಕೆ ತಕ್ಕ ಶ್ರಮ ಇರಬೇಕು ಎಂದು ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರ ಬೌದ್ಧಿಕ್ ಪ್ರಮುಖ್ ಶ್ರೀಧರಸ್ವಾಮಿ ತಿಳಿಸಿದರು.
ಸಾಗರದ ಬಾಪಟ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಸೀತಾಬಾಯಿ ರಾಮರಾವ್ ಬಾಪಟ್ ಚಾರಿಟಬಲ್ ಟ್ರಸ್ಟ್, ಸೇವಾಸಾಗರ ಟ್ರಸ್ಟ್ ಮತ್ತು ಸೇವಾಸಾಗರ ವಿದ್ಯಾಸಂಸ್ಥೆಯಿಂದ ತಾಲೂಕಿನ ಪ್ರತಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಗತವೈಭವ ಮರಳಿ ಬರುವ, ವಿಶ್ವಗುರುವಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮ ಶೈಕ್ಷಣಿಕ ಸಾಧನೆ ಇತರರಿಗೆ ಮಾರ್ಗದರ್ಶನವಾಗಬೇಕು. ಜಗತ್ತಿನಲ್ಲಿ ಭಾರತವನ್ನು ಶ್ರೇಷ್ಠವಾಗಿಸುವ ನಮ್ಮ ಹೊಣೆ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸಮಾಜ ನಮಗೆ ಅನೇಕ ಸಹಕಾರ ನೀಡಿರುತ್ತದೆ. ನಾವು ಉನ್ನತ ಸ್ಥಾನಕ್ಕೆ ಹೋದಾಗ ನಮ್ಮ ಹೊಣೆಗಾರಿಕೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರು ಜೋಷಿ ಫೌಂಡೇಶನ್‌ನ ಅಬಸೆ ದಿನೇಶಕುಮಾರ್ ಜೋಷಿ ಮಾತನಾಡಿ, ಪಾಲಕರು ಹೆಚ್ಚಿನ ನಿರೀಕ್ಷೆ ಇರಿಸಿ ನಿಮ್ಮನ್ನು ಶಾಲಾಕಾಲೇಜಿಗೆ ಕಳಿಸುತ್ತಾರೆ.ಇರುತ್ತಾರೆ. ಅದನ್ನು ಹುಸಿಗೊಳಿಸುವ ಕೆಲಸವನ್ನು ಮಕ್ಕಳು ಮಾಡಬಾರದು. ಅಂಕಗಳಿಗಾಗಿ ಕಷ್ಟಪಡುವುದು ಸಹಜ. ಅಂಕಗಳ ಜತೆಗೆ ಮಾನವೀಯ ಮೌಲ್ಯ, ಸಂಸ್ಕಾರ ಹಾಗೂ ಸಮಾಜಮುಖಿ ಆಲೋಚನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೇವಾಸಾಗರ ಟ್ರಸ್ಟ್ ಅಧ್ಯಕ್ಷ ಯು.ಎಚ್.ರಾಮಪ್ಪ, ಡಾ. ವಾಮನರಾವ್ ಬಾಪಟ್, ಗೋಪಾಲಕೃಷ್ಣ ಸಿಂಗ್, ಸೀತಾ ಬಾಪಟ್, ಶಾಮ್ ಬಾಪಟ್, ನಾರಾಯಣಮೂರ್ತಿ, ಆ.ಶ್ರೀ.ಆನಂದ್, ರಾಮಕೃಷ್ಣ ಬಾಪಟ್ ಇತರರಿದ್ದರು.