ಭೂಮಿ ಕೊಟ್ಟರೆ ಕ್ರೀಡಾಂಗಣ ನಿರ್ಮಾಣ

Mallesh Babu
Published on

ಕೋಲಾರ: ಜಿಲ್ಲೆಯಲ್ಲಿ 10 ಎಕರೆಗೂ ಅಧಿಕ ಜಾಗ ಮಂಜೂರು ಮಾಡಿದರೆ, ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗುವುದು ಎಂದು ಯುವಜನ ವ್ಯವಹಾರಗಳು, ಕ್ರೀಡೆಗಳು, ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ.ಮನ್ಸುಖ್​ ಮಾಂಡವಿಯಾ ಭರವಸೆ ನೀಡಿದರು.

ಸಂಸತ್​ ಅಧಿವೇಶನದಲ್ಲಿ ಸಂಸದ ಎಂ.ಮಲ್ಲೇಶ್​ ಬಾಬು ಅವರು ಕ್ರೀಡಾ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಯಾವುದಾದರೂ ಕ್ರೀಡೆಗೆ ಸಂಬಂಧಿಸಿದ ಅಕಾಡೆಮಿಗಳು ಕಾರ್ಯರ್ನಿಹಿಸುತ್ತಿದೆಯೇ, ಸದರಿ ಇರುವ ಕ್ರೀಡಾಗಂಣಗಳನ್ನು ಮೇಲ್ದರ್ಜೆಗೇರಿಸಿದರೆ ಅನುಕೂಲವಾಗಬಹುದೆ ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಮಲ್ಲೇಶ್​ ಬಾಬು ಮಾತನಾಡಿ, ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಇದ್ದಾರೆ. ಅವರಿಗೆ ನಿರಂತರವಾಗಿ ಅಭ್ಯಾಸ ಮಾಡಲು ಕ್ರೀಡಾಂಗಣದ ಕೊರತೆಯಿದೆ. ಇದರಿಂದಾಗಿ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಕೋಲಾರ ಜಿಲ್ಲೆಯಲ್ಲಿ ಕ್ರೀಡಾ ಸಂಕೀರ್ಣ ಸ್ಥಾಪಿಸುವ ಯಾವುದೇ ಪ್ರಸ್ತಾವನೆಯು ಪರಿಶೀಲನೆಯಲ್ಲಿಲ್ಲ. ಇದು ಕ್ಷೇತ್ರದ ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸದನದ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಕ್ರೀಡಾ ಸಚಿವರು,ಕೇಂದ್ರ ಸರ್ಕಾರ ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ನೀಡುವ ಪ್ರಯತ್ನಗಳಿಗೆ ಬದ್ಧವಾಗಿದೆ. ಮೂಲ ಸೌಕರ್ಯ ಕಲ್ಪಿಸುವ, ಉನ್ನತಿಕರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಇತರ ಅರ್ಹ ಘಟಕಗಳಿಂದ ಸ್ವೀಕರಿಸಿದ ಪ್ರಸ್ತಾವನೆಗಳನ್ನು ಹಣಕಾಸಿನ ಬೆಂಬಲಕ್ಕಾಗಿ ಪರಿಗಣಿಸಲಾಗುತ್ತದೆ. ಅವುಗಳ ಸಂಪೂರ್ಣತೆ, ತಾಂತ್ರಿಕ ಕಾರ್ಯ ಸಾಧ್ಯತೆ ಮತ್ತು ಯೋಜನೆಯಡಿಯಲ್ಲಿ ಹಣದ ಲಭ್ಯತೆಯನ್ನು ಪರಿಗಣನೆಗೆ ತೆಗೆದುಕೊಂಡು ಬಜೆಟ್​ ಬಿಡುಗಡೆ ಮಾಡಲಾಗುವುದು. ಕ್ರೀಡಾಂಗಣಕ್ಕೆ ಸೂಕ್ತ ಜಾಗ ನೀಡಬೇಕು ಎಂದು ಹೇಳಿದರು.

  • ಜಾಗ ಗುರುತಿಸಲು ಸೂಚನೆ
    ಸದನದಲ್ಲಿ ಚರ್ಚೆಯಾದ ಬೆನ್ನಲೇ ಸಂಸದ ಎಂ.ಮಲ್ಲೇಶ್​ ಬಾಬು, ಕ್ರೀಡಾ ಇಲಾಖೆಗೆ ಪತ್ರ ಬರೆದು ತಾಲೂಕಿನ ಹೊಳಲಿ ಅಥವಾ ನಗರ ಸಮೀಪದಲ್ಲಿ 10 ಎಕರೆ ಜಾಗ ಗುರುತಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ತಹಸೀಲ್ದಾರ್​ಗೆ ಸೂಚಿಸಿದ್ದಾರೆ.
  • ಅನುದಾನ ಮಂಜೂರಾತಿಗಾಗಿ ಪ್ರಸ್ತಾವ
    ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ಜಿಲ್ಲಾಧಿಕಾರಿಗೆ ಪತ್ರ ಬರೆದು ಖೇಲೋ ಇಂಡಿಯಾ ಯೋಜನೆಯಡಿ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಅವಕಾಶವಿದ್ದು, ಜಿಲ್ಲೆಯ ಕ್ರೀಡಾಪಟುಗಳಿಗೆ ಉಪಯೋಗವಾಗುವಂತಹ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ನಿವೇಶನ ಅಗತ್ಯವಿದೆ ಎಂದು ಕೋರಿದ್ದಾರೆ. ತಾಲೂಕಿನ ಹೊಳಲಿ ಅಥವಾ ನಗರ ಸಮೀಪದಲ್ಲಿ ಲಭ್ಯವಿರುವ 10 ಎಕರೆ ನಿವೇಶನವನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮಂಜೂರು ಮಾಡಿದರೆ, ಖೇಲೋ ಇಂಡಿಯಾ ಯೋಜನೆಯಡಿ ಅನುದಾನ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net