

ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಅಬಕಾರಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 666 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ ಹಾಗೂ ಮುಂಜಾನೆಯಿಂದ, ತಡ ರಾತ್ರಿ ತನಕ ನಿಗದಿತ ಸಮಯ ಮೀರಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರು, ವಿವಿಧ ಸಂ&ಸಂಸ್ಥೆಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ವ್ಯಾಪಕ ದೂರುಗಳು ಬಂದಿದ್ದವು. ಈ ಸಂಬಂಧ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ಸಮೃದ್ಧಿ ಮಂಜುನಾಥ್, ಜನಸ್ಪಂದನ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ತಿನಲ್ಲಿ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ಅಬಕಾರಿ ಅಕ್ರಮಗಳು ಹಾಗೂ ನಿಯಮಗಳ ಉಲ್ಲಂಘನೆ ಬಗ್ಗೆ ಧ್ವನಿ ಎತ್ತಿದ್ದರು.
ಜತೆಗೆ ಬಾರ್ ಪರವಾನಗಿ ನೀಡಲು ಹಾಗೂ ನವೀಕರಣಕ್ಕೆ ಮಾಲೀಕರಿಂದ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ವಸೂಲಿ ಬಗ್ಗೆಯೂ ಕೆಲ ಮಾಲೀಕರು ವಿಧಾನ ಪರಿಷತ್ ಸದಸ್ಯ ಅನಿಲ್ಕುಮಾರ್ ಅವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ವಿಧಾನ ಪರಿಷತ್ನಲ್ಲಿ ಧ್ವನಿ ಎತ್ತುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ. ಅಲ್ಲದೆ ಅಬಕಾರಿ ಸಂಬಂಧ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದರು. ಇದು ಸಾರ್ವಜನಿಕ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಇದರ ಬೆನ್ನಲೇ ಅಬಕಾರಿ ಜಿಲ್ಲಾಧಿಕಾರಿ ರಮೇಶ್ಬಾಬು ಅವರು ಇಲಾಖಾಧಿಕಾರಿಗಳ ಸಭೆ ನಡೆಸಿ ಅಕ್ರಮ ತಡೆಗೆ ಸೂಚನೆ ನೀಡಿದ್ದು, ಮಾಲೀಕರಿಗೆ ಸಂದೇಶ ಸಹ ರವಾನೆ ಮಾಡಿದ್ದಾರೆ.
ಕೋಟ್…
ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಕ್ರಮಕೈಗೊಳ್ಳಲಾಗಿದೆ. ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು ತಪ್ಪಿತಸ್ಥರು ಕಂಡು ಬಂದರೆ ದೂರು ದಾಖಲಿಸಲಾಗುತ್ತಿದೆ.- ಎಚ್.ರಮೇಶ್ ಕುಮಾರ್, ಜಿಲ್ಲಾ ಅಬಕಾರಿ ಡಿಸಿ
ಕೋಟ್…
ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಿರುವುದು ಉತ್ತಮ ಕೆಲಸ. ಇದು ಗ್ರಾಮೀಣ ಭಾಗದಲ್ಲಿ ಜಾಸ್ತಿ ನಡೆಯುತ್ತಿದ್ದು, ದಿಢೀರ್ ಭೇಟಿ ನೀಡಿ ತಪ್ಪಿತಸ್ಥರನ್ನು ಹಿಡಿದು ಅವರ ವಿರುದ್ಧ ಕ್ರಮಕೈಗೊಳ್ಳಬೇಕು.- ಶಶಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ, ಕೋಲಾರ.