

ಕಡೂರು: ಬೀದಿ ಬದಿ ವ್ಯಾಪಾರಿಗಳ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ಜನಸಂಪರ್ಕ ಕಚೇರಿಯಲ್ಲಿ ಸೋಮವಾರ ಶ್ರೀ ಬುದ್ಧ ಸಮಾನ ಮನಸ್ಕರ ಸ್ವಸಹಾಯ ಸಂಘದಿಂದ ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪಟ್ಟಣದ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ ಬಗ್ಗೆ ಅರಿವಿದೆ. ಅವುಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ವ್ಯಾಪಾರದ ದೃಷ್ಟಿಯಿಂದ ಶಾಶ್ವತ ನೆಲೆ ಕಂಡುಕೊಳ್ಳಲು ಸಣ್ಣ ಸಣ್ಣ ಮಳಿಗೆಗಳನ್ನು ನಿರ್ಮಿಸಿಕೊಡಲು ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದರು.
ಸ್ವಸಹಾಯ ಸಂಘದ ಅಧ್ಯಕ್ಷ ಮೂರ್ತಿ ಬಿದರಿಕೆರೆ ಮಾತನಾಡಿ, ಶಾಸಕ ಆನಂದ್ ಅವರು ಅಧಿಕಾರ ಇಲ್ಲದ ಸಮಯದಲ್ಲೇ ಬೀದಿ ಬದಿ ವ್ಯಾಪಾರಿಗಳ ಪರ ಹೋರಾಡಿ ನ್ಯಾಯ ಕೊಡಿಸಿದ್ದರು. ಅವರು ಇಂದು ಶಾಸಕರಾಗಿ ನಮ್ಮೆಲ್ಲರ ಕ್ಷೇಮ ಕಾಪಾಡುವರು ಎಂಬ ಭರವಸೆ ಇದೆ ಎಂದು ಹೇಳಿದರು.
ಪಟ್ಟಣದ ಮರವಂಜಿ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಬಳಿ ಶೌಚಗೃಹವನ್ನು ಬಹಳ ವರ್ಷಗಳ ಹಿಂದೆ ನಿರ್ಮಿಸಿದ್ದು, ಮೂರು ವರ್ಷಗಳಿಂದ ಪಾಳುಬಿದ್ದಿದೆ. ಇದರ ಜವಾಬ್ದಾರಿಯನ್ನು ಪುರಸಭೆಗೆ ವಹಿಸಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಿಕೊಡಬೇಕು. ಪಿಡಬ್ಲುೃಡಿ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಬೀದಿ ಬದಿ ವ್ಯಾಪಾರಿಗಳು ತಳ್ಳುವ ಗಾಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಮರವಂಜಿ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಿಡಬ್ಲುೃಡಿ ಕಾಂಪೌಂಡ್ ತೆರವುಗೊಳಿಸಿ ಚಿಕ್ಕ ಚಿಕ್ಕ ಮಳಿಗೆ ನಿರ್ಮಿಸಿ ಕೊಟ್ಟರೆ ಬೀದಿ ಬದಿ ವ್ಯಾಪಾರಿಗಳಿಗೆ ಶಾಶ್ವತ ನೆಲೆ ಆಗುತ್ತದೆ. ಸುಗಮ ಸಂಚಾರಕ್ಕೂ ಅನುಕೂಲವಾಗಲಿದೆ ಎಂದರು.
ಬುದ್ಧ ಸಮಾನ ಮನಸ್ಕರ ಸಂಘದ ಕಾರ್ಯದರ್ಶಿ ಗೋವಿಂದಪ್ಪ, ಸದಸ್ಯರಾದ ತಮ್ಮಯ್ಯ, ಲೋಕೇಶ್, ರಹೀಂ ಖಾನ್, ಗೋಪಿನಾಯ್ಕ, ಸೀನಣ್ಣ, ಮೂರ್ತಿ, ಮುಜಾಹಿದ್ದೀನ್, ದಾಕ್ಷಾಯಿಣಿ, ರೂಪಾ, ಗೀತಮ್ಮ, ತಿಮ್ಮಕ್ಕ, ಮಂಜುಳಾ, ಶೇಖರಪ್ಪ, ಬೀರೂರು ಶಿವು, ಮಾಲತೇಶ್ ಇತರರಿದ್ದರು.