

ತ್ಯಾಗರ್ತಿ: ನಾಡವಳ್ಳಿ ಗ್ರಾಮದಲ್ಲಿ ಗ್ರಾಮಠಾಣ ಜಾಗ ಒತ್ತುವರಿ ಮಾಡಿ ಗ್ರಾಪಂ ಅಧ್ಯಕ್ಷರು ಶೆಡ್ ನಿರ್ಮಿಸಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡಿದ್ದಾರೆ ಎಂದು ಆರೋಪಿಸಿ ನಾಡವಳ್ಳಿ ಗ್ರಾಮಸ್ಥರು ಬುಧವಾರ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಜಮೀನಿಗೆ ಸಂಬಂಧಿಸಿ ಮೂರು ವರ್ಷಗಳಿಂದ ವಿವಾದ ನಡೆಯುತ್ತಿದ್ದು, ನ್ಯಾಯಾಲಯದ ಮೆಟ್ಟಿಲೇರಿದೆ. ಇತ್ಯರ್ಥ ಆಗುವವರೆಗೆ ಜಮೀನನ್ನು ಯಾರೂ ಉಳುಮೆ ಮಾಡಬಾರದೆಂದು ಹಿಂದಿನ ಪಿಡಿಒ ಸೂಚಿಸಿದ್ದಾರೆ. ಅದರಂತೆ ಗ್ರಾಮಸ್ಥರು ನಡೆದುಕೊಂಡು ಬಂದಿದ್ದಾರೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡುವುದಿಲ್ಲ ಎಂದು ಆನಂದಪುರ ಪೊಲೀಸ್ ಠಾಣೆಗೂ ಮುಚ್ಚಳಿಕೆ ಬರೆದುಕೊಡಲಾಗಿತ್ತು. ಆದರೆ ಗ್ರಾಪಂ ಅಧ್ಯಕ್ಷರ ಕುಟುಂಬದಿಂದಲೇ ಕಾನೂನು ಉಲ್ಲಂಘನೆ ಆಗಿದೆ ಎಂದು ಆರೋಪಿಸಿದರು.
ಸರ್ಕಾರಿ ಜಾಗದಲ್ಲಿ ಸಾಗುವಳಿ ನಿಲ್ಲಿಸಿ, ಅಕ್ರಮವಾಗಿ ನಿರ್ಮಿಸಿದ ಶೆಡ್‌ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು. ಗ್ರಾಮಸ್ಥರಾದ ರವೀಂದ್ರ, ರಾಮಚಂದ್ರ, ಬುದ್ಯಪ್ಪ, ರಾಜು, ಗಣಪತಿ, ಶಿವಣ್ಣ, ಲಿಂಗಾಮೂರ್ತಿ, ನಾಗರಾಜ್ ಇತರರಿದ್ದರು.