ನೀರಿನ ಸಮಸ್ಯೆ ಆಗದಂತೆ ಬ್ಯಾರೇಜ್ ನಿರ್ಮಾಣ

tth araga
ತುಂಗಾ ನದಿ ದಡದಲ್ಲಿ ನಿರ್ಮಿಸಲಾದ ಚಕ್ರತೀರ್ಥದಿಂದ ರಾಮಮಂಟಪದ ಕಡೆಗೆ ಹೋಗುವ ರಸ್ತೆ ಉದ್ಘಾಟನೆಯನ್ನು ಶಾಸಕ ಆರಗ ಜ್ಞಾನೇಂದ್ರ ನೆರವೇರಿಸಿದರು. ಶಚ್ಚೀಂದ್ರ ಹೆಗ್ಡೆ, ಟಿ.ಎಲ್. ಸುಂದರೇಶ್, ಗೀತಾ ರಮೇಶ್, ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಜಯಪ್ರಕಾಶ್ ಶೆಟ್ಟಿ ಇತರರಿದ್ದರು.
Published on

ತೀರ್ಥಹಳ್ಳಿ: ತುಂಗಾ ನದಿಯ ಶುದ್ಧತೆ ಮತ್ತು ಅದರ ಪಾವಿತ್ರ್ಯ ಕಾಪಾಡಲು ಪಟ್ಟಣದ ಕೊಳಚೆ ನೀರು ನದಿಗೆ ಸೇರದಂತೆ ಯೋಜನೆ ಕೈಗೊಳ್ಳುವ ಅಗತ್ಯವಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕೊರತೆಯಾಗದಂತೆ ಬ್ಯಾರೇಜ್ ನಿರ್ಮಾಣವೂ ಅನಿವಾರ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣ ಪಂಚಾಯಿತಿಯಿಂದ ತುಂಗಾ ನದಿಯ ಎಡದಂಡೆಯ ಸ್ವಚ್ಛತೆ ನಿರ್ವಹಣೆ ಮತ್ತು ಸಾರ್ವಜನಿಕರಿಗೆ ಸಂಚರಿಸಲು ಅನುಕೂಲ ಕಲ್ಪಿಸುವ ಸಲುವಾಗಿ ನಿರ್ಮಿಸಲಾದ ಚಕ್ರತೀರ್ಥದಿಂದ ರಾಮಮಂಟಪದ ಕಡೆಗೆ ಹೋಗುವ ರಸ್ತೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪಟ್ಟಣದ ಕೊಳಚೆ ನೀರು ನದಿಗೆ ಸೇರುತ್ತಿರುವ ಕಾರಣ ತುಂಗಾ ನದಿಯ ನೀರು ಮಲೀನವಾಗುತ್ತಿರುವುದು ಕಳವಳಕಾರಿ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಬೇಸಿಗೆಯಲ್ಲಿ ಕೆಲವೊಮ್ಮೆ ಪಟ್ಟಣಕ್ಕೆ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ. ಹಾಗಾಗಿ ನೀರಿನ ಕೊರತೆ ಆಗದಂತೆ ಬ್ಯಾರೇಜ್ ನಿರ್ಮಿಸಬೇಕಿದೆ. ಮಳೆಗಾಲದ ಅವಧಿಯಲ್ಲಿ ನೆರೆ ನೀರಿನಿಂದಾಗಿ ಪಟ್ಟಣಕ್ಕೆ ಅಪಾಯವಾಗದಂತೆ ಬಾಳೇಬೈಲು ಹೊಸ ಸೇತುವೆಯಿಂದ ತೂಗು ಸೇತುವೆವರೆಗೆ ನದಿಯ ಎಡಭಾಗದಲ್ಲಿ ತಡೆಗೋಡೆ ನಿರ್ಮಿಸಲು ಸಂಸದ ಬಿ.ವೈ.ರಾಘವೇಂದ್ರ ಅವರ ಕಾಳಜಿಯಂತೆ 110 ಕೋಟಿ ರೂ. ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿ, ಈ ರಸ್ತೆ ತಾತ್ಕಾಲಿಕವಾಗಿದ್ದರೂ ಈ ಮಾರ್ಗವನ್ನು ಶಾಶ್ವತಗೊಳಿಸಬೇಕು. ಮುಖ್ಯವಾಗಿ ರಾಮೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಚಕ್ರತೀರ್ಥದ ಆವರಣದ ಶುದ್ಧತೆ ದೃಷ್ಟಿಯಿಂದಲೂ ಈ ಪರಿಸರವನ್ನು ಅಭಿವೃದ್ಧಿ ಮಾಡಬೇಕಿರುವುದು ನಮ್ಮ ಹೊಣೆಗಾರಿಕೆ ಎಂದು ತಿಳಿಸಿದರು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ಟಿ.ಎಲ್.ಸುಂದರೇಶ್, ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಜಯಪ್ರಕಾಶ್ ಶೆಟ್ಟಿ, ಡಾ. ಅನಿಲ್, ಬಿ.ಆರ್.ರಾಘವೇಂದ್ರ ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net