

ತರೀಕೆರೆ: ಪಟ್ಟಣ ಸೇರಿದಂತೆ ತಾಲೂಕಿನ ಸಿದ್ದರಹಳ್ಳಿ, ಬೇಲೇನಹಳ್ಳಿ, ಎಂ.ಸಿ.ಹಳ್ಳಿ, ಅಮೃತಾಪುರ, ಹಾದಿಕೆರೆ ಗ್ರಾಪಂಗಳಿಗೆ ಭಾನುವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಕ್ಕೆ ಅಭೂತಪೂರ್ವ ಸ್ವಾಗತ ದೊರೆಯಿತು.
ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪಾರ್ಲಿಮೆಂಟ್ ಕಟ್ಟಡ ಕಲಾಕೃತಿ ಒಳಗೊಂಡಿರುವ ಸಂವಿಧಾನ ಜಾಗೃತಿ ರಥಕ್ಕೆ ಮಹಿಳೆಯರು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡರು.
ಸಂವಿಧಾನದ ಆಶಯ ಸಾರುವ ಸಲುವಾಗಿ ಆಗಮಿಸಿದ್ದ ರಥ ಆಯಾ ಗ್ರಾಪಂ ಕಾರ್ಯಾಲಯವಿರುವ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನೇತೃತ್ವ ವಹಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಶಾಲಾ ಶಿಕ್ಷಕರು ಸಾರ್ವಜನಿಕರಿಗೆ ಸಂವಿಧಾನದ ಕುರಿತು ಅರಿವು ಮೂಡಿಸಿದರು.
ವಿವಿಧ ಶಾಲಾ ಮಕ್ಕಳು ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್, ಡಾ.ಬಿ.ಆರ್.ಅಂಬೇಡ್ಕರ್ ಮತ್ತಿತರ ಮಹಾನೀಯರ ಪೋಷಾಕು ಧರಿಸಿ ಪ್ರದರ್ಶಿಸಿದ ಛದ್ಮವೇಷ ಆಕರ್ಷಕವಾಗಿತ್ತು. ಬೈಕ್ ಜಾಥಾ ಮೆರವಣಿಗೆಗೆ ಮೆರುಗು ನೀಡಿದರೆ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜಾಥಾ ಕಳೆಗಟ್ಟುವಂತೆ ಮಾಡಿತ್ತು.
ಜಾಥಾದಲ್ಲಿ ವಿವಿಧ ಗ್ರಾಪಂ ಅಧ್ಯಕ್ಷರಾದ ಕಲಾವತಿ, ಎಸ್.ಮಲ್ಲಪ್ಪ, ರೇಖಾ, ಉಪಾಧ್ಯಕ್ಷರಾದ ಅನುಪಮಾ, ಇಲಾಹಿನ ಭಾನು, ಸದಸ್ಯರಾದ ಸಿ.ವೀರಮಣಿ, ಡಿ.ಕಿರಣ್, ಶೇಖರಪ್ಪ, ಮಂಜಪ್ಪ, ನೇತ್ರಮ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ನರೇಗಾ ಸಹಾಯಕ ನಿರ್ದೇಶಕ ಸಿ.ಟಿ.ಯೋಗೀಶ್, ಪಿಡಬ್ಲುೃಡಿ ಎಇಇ ನಾಗೇಂದ್ರಪ್ಪ, ಪಿಡಿಒಗಳಾದ ಸಿ.ರವಿನಾಯ್ಕ, ಟಿ.ಶಿವಮೂರ್ತಿ, ರಮೇಶ್, ಎನ್.ಕೆ.ಪವಿತ್ರಾ, ಎನ್.ಭೈರೇಶ್, ಶಿಕ್ಷಕರಾದ ಎಸ್.ಟಿ.ತಿಪ್ಪೇಶಪ್ಪ, ಶೀಲಾವತಿ ಮತ್ತಿತರರಿದ್ದರು.