ಡ್ರಗ್ಸ್ ಮಾಫಿಯಾ ಪ್ರಕರಣ: ಸದಾಶಿವನಗರ ಠಾಣೆ ಮುಖ್ಯ ಪೇದೆ ಸೆರೆ

Drugs
Published on

ಬೆಂಗಳೂರು: ಡಾರ್ಕ್ ನೆಟ್​ನಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದ ಗಣ್ಯ ಮಕ್ಕಳಿಗೆ ಸಹಕರಿಸಿದ್ದ ಆರೋಪದ ಮೇಲೆ ಸದಾಶಿವನಗರ ಠಾಣೆ ಮುಖ್ಯಪೇದೆ ಪ್ರಭಾಕರ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿದೇಶದಿಂದ ಡಾರ್ಕ್​ನೆಟ್ ಮೂಲಕ ಪೆಡ್ಲರ್​ಗಳು ಪಾರ್ಸೆಲ್​ನಲ್ಲಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಚಾಮರಾಜಪೇಟೆ ಅಂಚೆ ಕಚೇರಿಯಲ್ಲಿ ಪಾರ್ಸೆಲ್ ಸ್ವೀಕರಿಸಲು ಮತ್ತು ಗ್ರಾಹಕರಿಗೆ ತಲುಪಿಸುವ ಹಂತದಲ್ಲಿ ಪೆಡ್ಲರ್​ಗಳಿಗೆ ಪ್ರಭಾಕರ್ ತಾಂತ್ರಿಕ ನೆರವು ನೀಡುತ್ತಿದ್ದ. ಪ್ರತಿಯಾಗಿ ಮುಖ್ಯಪೇದೆಗೆ ಹಣ ನೀಡುತ್ತಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಬಂಧಿತ ಪೆಡ್ಲರ್​ಗಳಾದ ಸುನೀಷ್ ಹೆಗ್ಡೆ, ಹೇಮಂತ್ ಮುದ್ದಪ್ಪ, ಸುಜಯ್, ಪ್ರಸಿದ್ಧ ಶೆಟ್ಟಿ ಮತ್ತು ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ನೆಲೆಸಿದ್ದಾರೆ. ಕೆಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಉಡುಗೊರೆ ಕೊಟ್ಟು ವಿಶ್ವಾಸ ಗಳಿಸಿದ್ದರು. ಅದೇ ರೀತಿ ಪ್ರಭಾಕರ್​ಗೆ ಗಾಳ ಹಾಕಿ ಬೀಳಿಸಿದ್ದರು. ಡಾರ್ಕ್​ನೆಟ್ ವೆಬ್​ಸೈಟ್​ನಲ್ಲಿ ವಿದೇಶದಿಂದ ಹೈಡ್ರೋ ಗಾಂಜಾ ಸೇರಿ ಇತರೆ ಡ್ರಗ್ಸ್​ಗಳನ್ನು ಆರೋಪಿಗಳು ಸುಳ್ಳು ವಿಳಾಸ ಕೊಟ್ಟು ಖರೀದಿಸುತ್ತಿದ್ದರು.

ಆ ಡ್ರಗ್ಸ್ ಚಾಮರಾಜಪೇಟೆ ಅಂಚೆ ಕಚೇರಿಗೆ ತಲುಪುತ್ತಿತ್ತು. ಪಾರ್ಸೆಲ್ ಸ್ವೀಕರಿಸುವಾಗ ಯಾರಿಗೂ ಅನುಮಾನ ಬಾರದಂತೆ ಆರೋಪಿಗಳು ಎಚ್ಚರಿಕೆ ವಹಿಸಿದ್ದರು. ಪಾರ್ಸಲ್ ನೀಡಲು ಬರುವ ಅಂಚೆ ನೌಕರನ ಮೊಬೈಲ್ ನಂಬರ್ ಪಡೆದು ಪ್ರಭಾಕರ್​ಗೆ ಕೊಡುತ್ತಿದ್ದರು. ಡ್ರಗ್ಸ್ ಪಾರ್ಸಲ್ ಬಂದ ದಿನ ಅಂಚೆ ನೌಕರ ಎಲ್ಲಿದ್ದಾನೆ ಎಂಬ ಮಾಹಿತಿಯನ್ನು ಪೆಡ್ಲರ್​ಗಳಿಗೆ ಪ್ರಭಾಕರ್ ನೀಡುತ್ತಿದ್ದನು. ಅಂಚೆ ನೌಕರ ಪಾರ್ಸೆಲ್ ತರುತ್ತಿದನ್ನು ಖಚಿತ ಪಡಿಸಿಕೊಂಡು ದಾರಿ ನಡುವೆಯೇ ಭೇಟಿ ಮಾಡಿ ಪಾರ್ಸೆಲ್ ಪಡೆಯುತ್ತಿದ್ದರು. ಅದೇ ರೀತಿ ಗ್ರಾಹಕರ ಟವರ್ ಲೋಕೇಷನ್ ಸಹ ಪಡೆಯುತ್ತಿದ್ದರು. ಹೀಗೆ ಒಬ್ಬರ ಟವರ್ ಲೋಕೇಷನ್ ಕಳುಹಿಸಿದರೆ ಪ್ರತಿಯಾಗಿ ಮುಖ್ಯಪೇದೆಗೆ 5 ಸಾವಿರ ರೂ.ಗಳನ್ನು ಡ್ರಗ್ಸ್ ದಂಧೆಕೋರರು ಕೊಡುತ್ತಿದ್ದರು.

ಗೋವಾದಲ್ಲಿ ದರ್ಶನ್, ಸುನೀಷ್, ಹೇಮಂತ್ ಬಂಧಿತರಾಗಿದ್ದರು. ಆರೋಪಿಗಳ ವಿಚಾರಣೆ ವೇಳೆ ಪ್ರಭಾಕರ್ ನೆರವಿನ ಸಂಗತಿ ಬೆಳಕಿಗೆ ಬಂದಿತ್ತು. ಕೂಡಲೇ ಆತನನ್ನು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದರು. ಮೊದಲು ಆರೋಪಿಗಳ ಪರಾರಿ ವೇಳೆ ಸಹಕರಿಸಿದ್ದಾನೆ ಎಂಬ ಅನುಮಾನವಿತ್ತು. ಆರೋಪಿಗಳ ವಾಟ್ಸ್​ಆಪ್ ಸಂದೇಶಗಳನ್ನು ಪರಿಶೀಲಿಸಿದಾಗ ಪೆಡ್ಲರ್​ಗಳಿಗೂ ಪ್ರಭಾಕರ್ ಸಾಥ್ ಕೊಟ್ಟಿರುವ ಮಾಹಿತಿ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ತಾಂತ್ರಿಕ ತರಬೇತಿ: ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಚಲನವಲನದ ಪತ್ತೆಗೆ ಟವರ್ ಲೋಕೇಷನ್ ಪಡೆಯಲು ಠಾಣಾಧಿಕಾರಿಗಳಿಗೆ ಮೊಬೈಲ್ ಸೇವಾ ಕಂಪನಿಗಳು ಅವಕಾಶ ನೀಡಿವೆ. ಈ ತಾಂತ್ರಿಕ ಕೆಲಸಕ್ಕೆ ಪರಿಣತ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಆಯ್ದ ಸಿಬ್ಬಂದಿಗೆ ವಿಶೇಷ ತರಬೇತಿ ಕೊಡಿಸಲಾಗುತ್ತದೆ. ದೆಹಲಿ ಮಟ್ಟದಲ್ಲಿ ಪ್ರಭಾಕರ್ ತಾಂತ್ರಿಕ ತರಬೇತಿ ಪಡೆದಿದ್ದ. 2007ರಲ್ಲಿ ಇಲಾಖೆಗೆ ಸೇರಿದ್ದ ಪ್ರಭಾಕರ್, ಎಸ್.ಜೆ. ಪಾರ್ಕ್ ಠಾಣೆ, ಆನಂತರ ಸದಾಶಿವನಗರ ಠಾಣೆಯಲ್ಲಿ 1 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ.

1 ವರ್ಷದಿಂದ ಸಂಪರ್ಕ: ಬಂಧಿತ ಆರೋಪಿಗಳಾದ ಸುನೀಷ್ ಹೆಗ್ಡೆ, ಹೇಮಂತ್ ಮುದ್ದಪ್ಪ ಹಾಗೂ ಪ್ರಸಿದ್ಧ ಶೆಟ್ಟಿ ವಿಚಾರಣೆ ವೇಳೆ ಪ್ರಭಾಕರ್ ಪಾತ್ರದ ಕುರಿತು ಬಹಿರಂಗವಾಗಿದೆ. ಮೊಬೈಲ್ ಕರೆಗಳ ವಿವರ ಮತು ್ತಾಟ್ಸ್​ಆಪ್ ಸಂದೇಶ ಪರಿಶೀಲಿಸಿ ದಾಗ ಪ್ರಭಾಕರ್ ಸಂವಹನ ಕುರಿತು ಮತ್ತಷ್ಟು ವಿವರ ಲಭ್ಯವಾಯಿತು. ಒಂದು ವರ್ಷದಿಂದ ಆರೋಪಿಗಳಿಗೆ ನಿರಂತರವಾಗಿ ಕಾನೂನುಬಾಹಿರವಾಗಿ ಟವರ್ ಲೋಕೇಷನ್ ಶೇರ್ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಯಾರೇ ಭಾಗಿ ಆಗಿದ್ದರೂ ರಕ್ಷಿಸುವುದಿಲ್ಲ

ಬೆಂಗಳೂರು: ಡ್ರಗ್ಸ್ ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ನಿಷ್ಪಕ್ಷಪಾತ ಹಾಗೂ ನಿರ್ಭೀತಿಯಿಂದ ತನಿಖೆ ನಡೆಸುತ್ತಿದ್ದಾರೆ. ಹಿಂದಿನ ಯಾವುದೇ ಸರ್ಕಾರಗಳು ತೆಗೆದá-ಕೊಳ್ಳದೆ ಇರುವ ದಿಟ್ಟ ಕ್ರಮಗಳನ್ನು ನಮ್ಮ ಸರ್ಕಾರ ತೆಗೆದá-ಕೊಂಡಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ನಿಷ್ಪಕ್ಷಪಾತ ತನಿಖೆಯಿಂದಾಗಿ ಘಟಾನುಘಟಿಗಳು ಜೈಲುಪಾಲಾಗಿದ್ದಾರೆ ಎಂದು ಹೇಳಿದ್ದಾರೆ. ಪ್ರತಿದಿನ ಹೊಸ ಎಫ್​ಐಆರ್​ಗಳು ದಾಖಲಾಗುತ್ತಲೇ ಇವೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ರ್ತಾಕ ಅಂತ್ಯ ಕಾಣುವವರೆಗೂ ತನಿಖೆ ನಿಲ್ಲಿಸುವುದಿಲ್ಲ. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ಇದರಿಂದಾಗಿಯೇ ಅನೇಕರು ಜೈಲು ಕಂಬಿ ಎಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಿನೀಶ್ ಮತ್ತೆ ನ್ಯಾಯಾಂಗ ಬಂಧನಕ್ಕೆ

ಬೆಂಗಳೂರು: ಕೇರಳ ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೀಶ್ ಕೊಡಿಯೇರಿಯನ್ನು ನ್ಯಾಯಾಲಯವು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಡ್ರಗ್ಸ್ ಪೆಡ್ಲರ್​ಗೆ ಅಕ್ರಮವಾಗಿ ಹಣಕಾಸು ವರ್ಗಾವಣೆ ಮಾಡಿ ಜಾರಿ ನಿರ್ದೇಶನಾಲಯ (ಇಡಿ) ಕೈಗೆ ಸಿಕ್ಕಿಬಿದ್ದಿದ್ದ ಬಿನೀಶ್​ನ್ನು ನ.20ರ ವರೆಗೆ ಬೆಂಗಳೂರು ವಲಯದ ನಾರ್ಕೆಟಿಕ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಶುಕ್ರವಾರ ವಶಕ್ಕೆ ಪಡೆದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಎನ್​ಸಿಬಿ ಅಧಿಕಾರಿಗಳು ಹಾಜರುಪಡಿಸಿದ್ದರು. ನ್ಯಾಯಾಲಯವು ಬಿನೀಶ್​ಗೆ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದೆ. ಎನ್​ಸಿಬಿ ಅಧಿಕಾರಿಗಳು ವಿಚಾರಣೆ ವೇಳೆ ಬಿನೀಶ್​ನಿಂದ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ಮತ್ತೋರ್ವ ಆರೋಪಿ ಎನ್​ಸಿಬಿ ಬಲೆಗೆ: ಡ್ರಗ್ಸ್ ಪ್ರಕರಣದಲ್ಲಿ ಬಿನೀಶ್ ಹಾಗೂ ಡ್ರಗ್ಸ್ ಪೆಡ್ಲರ್ ಮೊಹಮದ್ ಅನೂಪ್ ಆಪ್ತನಾಗಿದ್ದ ಸುಹಾಸ್ ಕೃಷ್ಣಗೌಡ ಎಂಬಾತನನ್ನು ಎನ್​ಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈತ ಡ್ರಗ್ಸ್ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net