

ಹುಣಸೂರು: ಮೈಮುಲ್ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಬೇಕೆಂಬ ದುರುದ್ದೇಶದಿಂದ ಸಚಿವ ಕೆ.ವಂಕಟೇಶ್ ಸಹಕಾರ ಕ್ಷೇತ್ರ ಮತ್ತು ಪ್ರಜಾತಂತ್ರ ವಿರೋಧಿ ಕ್ರಮ ಅನುಸರಿಸುತ್ತಿದ್ದಾರೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನಕುಮಾರ್ ಆರೋಪಿಸಿದ್ದಾರೆ.
ವಾಸಸ್ಥಳ ದಾಖಲೆ ಕುರಿತಂತೆ ಹುಣಸೂರಿನ ಸಹಕಾರ ಇಲಾಖೆಯ ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲು ಗುರುವಾರ ಹುಣಸೂರಿಗೆ ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿ, ಮೈಮುಲ್ ಅಧ್ಯಕ್ಷನಾಗಿ ರೈತಪರ ಯೋಜನೆಗಳನ್ನು ಜಾರಿಗೆ ತಂದು ಸಾರ್ಥಕ ಸೇವೆಯನ್ನು ಮಾಡುತ್ತಿದ್ದೇನೆ. ಆದರೆ, ನನ್ನ ಬೆಳವಣಿಗೆಯನ್ನು ಸಹಿಸದ ಮತ್ತು ತಮ್ಮ ಪುತ್ರನಿಗೆ ಸಹಕಾರ ಕ್ಷೇತ್ರದಲ್ಲಿ ಸ್ಥಾನ ಕಲ್ಪಿಸುವ ಉದ್ದೇಶದಿಂದ ನನ್ನ ವಿರುದ್ಧ ವಾಸಸ್ಥಳ ದಾಖಲೆ ಕುರಿತು 2015ರಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನಾನು ಕಗ್ಗುಂಡಿಯಲ್ಲೇ ವಾಸವಿದ್ದು ನನ್ನ ವಾಸಸ್ಥಳವನ್ನು ಕಗ್ಗುಂಡಿ ವಿಳಾಸಕ್ಕೆ ನೀಡಿದ್ದೇನೆ. ಅದು ತಪ್ಪು ಎನ್ನಲು ಇವರ‌್ಯಾರು? ನ್ಯಾಯಾಲಯವು ಇವರ ದೂರಿನ ವಿರುದ್ಧ ತಡೆಯಾಜ್ಞೆ ನೀಡಿದೆ. ಹೀಗಿದ್ದೂ ಸಚಿವರು ಸುಖಾಸುಮ್ಮನೇ ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿ ವಾಸಸ್ಥಳದ ವಿರುದ್ಧ ವಿಚಾರಣೆ ನಡೆಸಲು ನೋಟಿಸ್ ನೀಡುವಂತೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಪಿರಿಯಾಪಟ್ಟಣ ತಾಲೂಕಿಗೆ 60 ಕೋಟಿ ರೂ. ವೆಚ್ಚದ ಪಶು ಆಹಾರ ಕೇಂದ್ರ ಸ್ಥಾಪನೆಗೆ ಅನುದಾನ ಮಂಜೂರಾಗಿದ್ದು, ಕಾಮಗಾರಿ ನಡೆಸಲು ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು.
ನಿರ್ದೇಶಕರಿಗೆ ಬೆದರಿಕೆ: ಮೈಮುಲ್‌ನ 14 ನಿರ್ದೇಶಕರ ಪೈಕಿ 11 ಜನರು ಜೆಡಿಎಸ್ ಬೆಂಬಲಿತರಿದ್ದು, ಎಲ್ಲ ನಿರ್ದೇಶಕರಿಗೆ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಬೆಂಬಲ ನೀಡಬೇಕೆಂದು ಬೆದರಿಕೆ ಹಾಕುತ್ತಿದ್ದಾರೆ. ಜೆಡಿಎಸ್ ಪಕ್ಷದವನು ಎನ್ನುವ ಒಂದೇ ಕಾರಣಕ್ಕೆ ನನಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಮೈಸೂರು ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಶಾಸಕ ಜಿ.ಡಿ.ಹರೀಶ್‌ಗೌಡರನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಅಭಿವೃದ್ಧಿ ವಿರೋಧಿ ಎನ್ನುವ ಹಣೆಪಟ್ಟಿ ಸರ್ಕಾರಕ್ಕೆ ಬಂದಿದೆ. ಇದೀಗ ಡಿಸಿಸಿ ಬ್ಯಾಂಕಿನ ಆರ್ಥಿಕ ಅಪರಾಧ ಪ್ರಕರಣದ ಆರೋಪಿಗಳನ್ನೇ ಆಯಕಟ್ಟಿನ ಸ್ಥಳಗಳಲ್ಲಿ ಇರಿಸಿ ಬ್ಯಾಂಕ್‌ನ ಅವನತಿಗೆ ಕಾರಣರಾಗುತ್ತಿದ್ದಾರೆ. ರೈತರಿಗೆ ಹಾಲಿನ ಪ್ರೋತ್ಸಾಹ ಧನ ಕಳೆದ 4-5 ತಿಂಗಳುಗಳಿಂದ ಬಾಕಿ ಇದ್ದು ಜಿಲ್ಲೆಯಲ್ಲಿ 68 ಕೋಟಿ ರೂ.ಗೂ ಹೆಚ್ಚು ಹಣ ರೈತರ ಖಾತೆಗೆ ಬಂದಿಲ್ಲ ಎಂದರು.
ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಸಹಕಾರಿ ತತ್ವದಡಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕಗ್ಗುಂಡಿ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಕೆ.ಟಿ.ಕೃಷ್ಣೇಗೌಡ (ಉಪಾಧ್ಯಕ್ಷ), ಕೆ.ಮಹೇಶ್, ಮಂಜುನಾಥ್ ರೇಣುಕಮ್ಮ, ಪಾರ್ವತಮ್ಮ, ಕನಕಾ, ನಿಂಗರಾಜು, ಕೆ.ಎಸ್.ಶಿವರಾಜು, ಸಿದ್ದರಾಜು ಇತರರು ಇದ್ದರು.