

Aravind Bellad: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಧರ್ಮವನ್ನು ಒಡೆಯಲು ಹೊರಟಿದೆ. ಇದಕ್ಕೆ ರಾಜ್ಯದ ಜನ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದು ಸೋಮವಾರ(ಸೆ. 15) ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ವಾಗ್ದಾಳಿ ನಡೆಸಿದರು.
ಬಿಜಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಆ ಅಧಿಕಾರವಿದೆ. ಹೀಗಾಗಿ ಕಾಂಗ್ರೆಸ್ ಸಾಮಾಜಿಕ-ಆರ್ಥಿಕ ಸಮೀಕ್ಷೆ ಹೆಸರಲ್ಲಿ ಧರ್ಮ ಒಡೆಯುವ ಕೆಲಸಕ್ಕೆ ಮುಂದಾಗಿದೆ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ನಮ್ಮ ಜನ ಜಾಗೃತರಾಗಿದ್ದಾರೆ. ಅವರೆಂದೂ ಮೋಸ ಹೋಗಲ್ಲ. ಈ ಹಿಂದೇ 2018ರಲ್ಲಿ ಎಂ.ಬಿ. ಪಾಟೀಲ ಅವರು ಸಿದ್ದರಾಮಯ್ಯ ಅಣತಿಯಂತೆ ಲಿಂಗಾಯತ ವೀರೈಶವರಲ್ಲಿ ಗೊಂದಲ ಸೃಷ್ಠಿಸಿದಾಗ ಹೊಡೆತ ತಿಂದರು. ಈಗಲು ಹಿಂದು ಸಮಾಜದಲ್ಲಿ ಒಡಕ್ಕುಂಟು ಮಾಡಲೂ ಹೊರಟಿದ್ದು ಮತ್ತೆ ಹೊಡೆತ ಬೀಳಲಿದೆ ಎಂದು ಹೇಳಿದರು.
2011ರ ಜನಗಣತಿ ಸಂದರ್ಭ ಯುಪಿಎ ಅವಧಿಯಲ್ಲಿ ಉದ್ದೇಶ ಪೂರ್ವಕ ಜಾತಿಗಣತಿ ಕಾಲಂನಲ್ಲಿ ಇತರೆ ಎಂದು ಸೇರಿಸಲಾಗಿತ್ತು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಪಾರ್ಸಿ ಹೀಗೆ ಮತ್ತಿತರ ಏಳು ಧರ್ಮಗಳ ಕಾಲಂ ಇದ್ದು ಅದರಲ್ಲಿ ನಾಸ್ತಿಕ ಎಂಬ ಒಂದು ಕಾಲಂ ಸಹ ಇತ್ತು. ಇದೀಗ ರಾಜ್ಯ ಸರ್ಕಾರದ ಇತರೆ ಎಂಬ ಮತ್ತೊಂದು ಕಾಲಂ ಸೇರಿಸಿದೆ. ಇದರ ಹಿಂದಿನ ಉದ್ದೇಶವೆಂದರೆ ದೇಶದಲ್ಲಿರುವ ಬುಡಕಟ್ಟು ಜನರ ಮತಾಂತರಕ್ಕೆ ಅನುಕೂಲ ಮಾಡಿಕೊಡುವುದು ಎಂದರು.
ಕ್ರೀಶ್ಚಿಯನ್ ಧರ್ಮದಲ್ಲಿ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್, ಆರ್ಥೋಡೆಕ್ಸ್ ಎಂಬ ಜಾತಿಗಳಿವೆ. ಅದನ್ನೆಲ್ಲ ಬಿಟ್ಟು ದೇವಾಂಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್ ಎಂದು ಸೇರಿಸಲಾಗಿದೆ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ನಮ್ಮ ಜನ ಎಂದಿಗೂ ಬೀದಿಗಿಳಿದು ಹೋರಾಟ ಮಾಡುವುದಾಗಲಿ, ಚಾಕು-ಚೂರಿ ಹಿಡಿದು ಬೀದಿಗೆ ಬರೋದಾಗಲಿ, ಕಲ್ಲು ಎಸೆಯೋದಾಗಲಿ ಮಾಡಲ್ಲ. ಬದಲಾಗಿ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ವೀರಶೈವ-ಲಿಂಗಾಯತ ಗೊಂದಲ
ವೀರಶೈವ-ಲಿಂಗಾಯತ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಂಕರ ಬಿದರಿಯವರು ನಿರ್ಧಾರ ಪ್ರಕಟಿಸಿದ್ದಾರೆ.
ಅಖಿಲ ಭಾರತೀಯ ವೀರಶೈವ ಮಹಾಸಭಾದವರು 19ನೇ ತಾರೀಖಿಗೆ ಹುಬ್ಬಳ್ಳಿಯಲ್ಲಿ ಜಾಥಾ ಮಾಡುತ್ತಿದ್ದಾರೆ. ಬ್ಯಾನರ್ ಅಷ್ಟೇ ಮಹಾಸಭಾದ್ದು. ಅದರ ಹಿಂದಿರುವುದು ಎಲ್ಲ ಕಾಂಗ್ರೆಸ್ ಶಕ್ತಿಗಳು. ಶಾಮನೂರ, ಖಂಡ್ರೆ ಅವರೇ ಮಹಾಸಭಾದ ಪ್ರಮುಖರಿದ್ದಾರೆ. ಇದಕ್ಕೆ ಈಗ ಎಂ.ಬಿ. ಪಾಟೀಲ ಕೈಜೋಡಿಸಿದ್ದಾರೆ.
ಧರ್ಮದ ಕಾಲಂನಲ್ಲಿ ಹಿಂದು ಧರ್ಮ ಎಂದು, ಜಾತಿ ಕಾಲಂನಲ್ಲಿ ಲಿಂಗಾಯತ-ವೀರಶೈವ, ವೀರಶೈವ-ಲಿಂಗಾಯತ ಅಥವಾ ಲಿಂಗಾಯತ ಇಲ್ಲವೇ ವೀರಶೈವ ಎಂದು ನಮೂದಿಸಿ ಅದರ ಮುಂದೆ ಉಪಜಾತಿ ಬರೆಯಿಸಲು ಕರೆ ನೀಡಲಾಗಿತ್ತು. ಆಗ ಸಭೆಯಲ್ಲಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಕೂಡ ಒಲವು ತೋರಿದ್ದರು.
ಈಗ ಕಾಂಗ್ರೆಸ್‌ನವರೆಲ್ಲ ಕೂಡಿ ಸಿದ್ದರಾಮಯ್ಯ ಅಣತಿಯಂತೆ ಇತರೆ ಎಂಬ ಕಾಲಂನಲ್ಲಿ ಹಿಂದು ವೀರಶೈವ-ಲಿಂಗಾಯತ ಎಂದು ಬರೆಯಿಸಲು ಅದರ ಕೆಳಗೆ ವೀರಶೈವ-ಲಿಂಗಾಯತ ಎಂದು ಜಾತಿ ಹೆಸರು ಬರೆಯುವಂತೆ ಮಾಡಿ ಹಿಂದು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲ ಹಿಂದು ಆಚಾರ-ವಿಚಾರ, ಸಂಸ್ಕೃತಿಯುಳ್ಳವರು. ಬಸವಣ್ಣನವರು ನಮ್ಮ ಧರ್ಮದಲ್ಲಿದ್ದ ಅಸ್ಪಶ್ಯತೆ, ಮೂಢನಂಬಿಕೆ ಹೋಗಲಾಡಿಸಲು ಶ್ರಮಿಸಿದರು. ಅವರೆಂದೂ ಸನಾತನ ಧರ್ಮದ ಭಾಗ ಅಲ್ಲ ಎಂದು ಹೇಳಿಲ್ಲ. ಎಡಪಂಥೀಯರು ಸಮಾಜದಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದರು.
ಬಿಜೆಪಿಯಲ್ಲೂ ಅಲ್ಪ-ಸ್ವಲ್ಪ ಸಮಸ್ಯೆ ಇದೆ
ಬಿಜೆಪಿಯಿಂದ ಉಚ್ಚಾಟಿತಗೊಂಡ ನಾಯಕರು ಒಟ್ಟಾಗಿ ಹೊಸ ಪಕ್ಷ ಕಟ್ಟುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾಗಿ ಪ್ರತಿಕ್ರಿಯಿಸದ ಶಾಸಕ ಅರವಿಂದ ಬೆಲ್ಲದ, ಕಾಂಗ್ರೆಸ್ ವಿರೋಧಿ ವಾತಾವರಣ ರಾಜ್ಯದಲ್ಲಿದೆ. ಜನರ ಭಾವನೆ ಅರಿತು, ಪಕ್ಷ ಹೆಜ್ಜೆಯನ್ನಿಡಬೇಕಿದೆ. ನಮ್ಮಲ್ಲೂ ಅಲ್ಪಸ್ವಲ್ಪ ಸಮಸ್ಯೆಗಳಿವೆ. ಅದೆಲ್ಲ ಹೈಕಮಾಂಡ್ ಗಮನಿಸಲಿದೆ ಎಂದರು.
ಚುನಾವಣೆಗೆ ಇನ್ನೂ 2 ವರ್ಷ 9 ತಿಂಗಳು ಬಾಕಿ ಇದೆ. ಪ್ರತಿ ಆರು ತಿಂಗಳಿಗೆ ರಾಜಕಾರಣದಲ್ಲಿ ವಾತಾವರಣ ಬದಲಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಏನು ಮಾಡಬೇಕೋ ಅದನ್ನು ಹೈಕಮಾಂಡ್ ಮಾಡಲಿದೆ. ಪಕ್ಷದಲ್ಲಿ ತೊಂದರೆ ಇಲ್ಲವೆಂದಲ್ಲ. ಅದನ್ನು ಬಗೆಹರಿಸುವ ಶಕ್ತಿ ಹೈಕಮಾಂಡ್‌ನಲ್ಲಿದೆ. ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ.
ಸ್ವಲ್ಪ ಮಟ್ಟಿಗೆ ನಮ್ಮ ಪಕ್ಷದಲ್ಲಿ ಹೆಚ್ಚುಕಡಿಮೆ ಆಗಿದೆ. ಅದನ್ನು ಬಗೆಹರಿಸಿಕೊಂಡು ಹೋಗುವ ಕೆಲಸ ಮಾಡಲಾಗುವುದು. ಐದೂ ಬೆರಳು ಸಮ ಇರಲ್ಲ. ಕಾಂಗ್ರೆಸ್‌ನಲ್ಲೂ ಒಡಕಿದೆ. ಡಿ.ಕೆ. ಶಿವಕುಮಾರ, ಜಿ. ಪರಮೇಶ್ವರ ಸಿಎಂ ಹುದ್ದೆಗಾಗಿ ಪೈಪೋಟಿ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಹ ಮುಖ್ಯಮಂತ್ರಿಯಾಗುವ ಯೋಚನೆ ಮಾಡ್ತಿದ್ದಾರೆ. ಎಲ್ಲರಿಗೂ ವೈಯಕ್ತಿಕ ಆಸೆ, ಆಕಾಂಕ್ಷೆ ಇರಲಿದೆ. ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗಳನ್ನು ಸಮರ್ಥನೆ ಮಾಡಿಕೊಳ್ಳಲ್ಲ. ರಾಜಕಾರಣದಲ್ಲಿ ಯಶಸ್ವಿಗೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗಬೇಕು ಎಂದರು.
ಹಾಸನ ಟ್ರಕ್ ಅಪಘಾತಕ್ಕೆ ಡ್ರಗ್ಸ್ ದಂಧೆಯೇ ಕಾರಣ
ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಟ್ರಕ್ ಅಪಘಾತದಲ್ಲಿ ಮೃತರಾದವರ ಮನೆಗಳಿಗೆ ಆರ್.ಅಶೋಕ ಭೇಟಿ ನೀಡಿದ್ದಾರೆ. ಘಟನೆಗೆ ಪ್ರಮುಖ ಕಾರಣ ಟ್ರಕ್ ಚಾಲಕ ಡ್ರಗ್ಸ್ ತೆಗೆದುಕೊಂಡಿದ್ದ ಎಂಬುದು ತಿಳಿದು ಬಂದಿದೆ. ಇದನ್ನು ನೋಡಿದ್ರೆ ರಾಜ್ಯದಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ತಿಳಿಯುತ್ತೆ ಎಂದು ಆರೋಪಿಸಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.