

ಚಂಡೀಗಢ: ಮೊದಲ ಬಾರಿಗೆ ಹರಿಯಾಣ ವಿಧಾನಸಭಾ ಚುನಾವಣಾ ( Haryana Election ) ಅಖಾಡಕ್ಕೆ ಇಳಿದಿರುವ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಪೊಗಟ್ ( Vinesh Phogat ) ಗೆ ಮತಎಣಿಕೆಯ ಆರಂಭದಲ್ಲೇ ಶಾಕ್ ಎದುರಾಗಿದೆ. ನಾಲ್ಕನೇ ಸುತ್ತಿನ ಮತಎಣಿಕೆಯಲ್ಲಿ 3000 ಮತಗಳ ಅಂತರದಿಂದ ವಿನೇಶ್ ಹಿನ್ನಡೆ ಅನುಭವಿಸಿದ್ದಾರೆ.
ವಿನೇಶ್ ಪೊಗಟ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಜುಲಾನಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಯೋಗೇಶ್ ಬೈರಾಗಿ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದೇ ಟ್ರೆಂಡ್ ಮುಂದುವರಿದರಿ ವಿನೇಶ್ಗೆ ಮೊದಲ ಚುನಾವಣೆಯಲ್ಲೇ ಭಾರಿ ಮುಖಭಂಗವಾಗಲಿದೆ.
ಅಧಿಕ ದೇಹತೂಕದಿಂದಾಗಿ ಕುಸ್ತಿಯಲ್ಲಿ ಫೈನಲ್ಗೆ ಅರ್ಹತೆ ಪಡೆಯದೆ ಪ್ಯಾರಿಸ್ ಒಲಿಂಪಿಕ್ಸ್ನಿಂದ ಹೊರಬಿದ್ದ ಬೆನ್ನಲ್ಲೇ ವಿನೇಶ್ ಅವರು ಕಾಂಗ್ರೆಸ್ನಿಂದ ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವುದಾಗಿ ಘೋಷಣೆ ಮಾಡಿದರು. ನಾಮಪತ್ರದ ಜತೆಗೆ ವಿನೇಶ್ ಪೋಗಟ್ ಸಲ್ಲಿಸಿರುವ ಅಫಿಡೆವಿಟ್ ಪ್ರಕಾರ ಅವರು ಸುಮಾರು ಎರಡು ಕೋಟಿ ರೂ. ಆಸ್ತಿಯ ಒಡತಿಯಾಗಿದ್ದಾರೆ. ಸದ್ಯ 1.95 ಲಕ್ಷ ರೂ. ನಗದು ಹೊಂದಿರುವ ವಿನೇಶ್ 3 ಐಷಾರಾಮಿ ಕಾರುಗಳ ಒಡತಿಯೂ ಆಗಿದ್ದಾರೆ.
ಸದ್ಯದ ಟ್ರೆಂಡ್ ಪ್ರಕಾರ 90 ಸದಸ್ಯಬಲದ ಹರಿಯಾಣ ವಿಧಾನಸಭೆಯಲ್ಲಿ (Haryana Assembly) ಸರ್ಕಾರ ರಚಿಸಲು 46 ಶಾಸಕರ ಅಗತ್ಯವಿದ್ದು, ಬಿಜೆಪಿ (BJP) 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 36 ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಮುನ್ನಡೆ ಸಾಧಿಸಿದ್ದು, ಬಿಜೆಪಿಗೆ ನಿಖರ ಪೈಪೋಟಿ ನೀಡುತ್ತಿದೆ. ಜೆಜೆಪಿ (JJP)ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್)