

ಪುರಿ: ದೇಶದಲ್ಲಿ ಲೋಕಸಭೆ ಕದನದ ಕಣ ದಿನ ಕಳೆದಂತೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಬೇಕೆಂಬ ಹಂಬಲದಲ್ಲಿ ಕಾಂಗ್ರೆಸ್ ಪ್ರಚಾರ ನಡೆಸುತ್ತಿದ್ದರೆ ಅತ್ತ ಪಕ್ಷದ ಅಭ್ಯರ್ಥಿಗಳು ಒಂದರ ಮೇಲೊಂದರಂತೆ ಶಾಕ್ ನೀಡುತ್ತಿದ್ದಾರೆ.
ಇದೀಗ ಮಹತ್ವದ ಬೆಳವಣಿಗೆಯಲ್ಲಿ ಪುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತ ಮೊಹಾಂತಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಸೂರತ್, ಇಂದೋರ್ ಬಳಿಕ ಕಾಂಗ್ರೆಸ್ಗೆ ಪುರಿ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುತ್ತಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ಗೆ ಪತ್ರ ಬರೆದಿರುವ ಸುಚರಿತ, ಪಕ್ಷವು ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಪ್ರಚಾರಕ್ಕೆ ಯಾವುದೇ ಹಣದ ನೆರವನ್ನು ನೀಡಿಲ್ಲ. ಪ್ರಚಾರಕ್ಕೆ ಹಣದ ಕೊರತೆ ಎದುರಾಗಿದ್ದು, ನನ್ನ ಪ್ರಚಾರಕ್ಕೆ ಬೆಂಬಲ ನೀಡಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ನಾನು ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದಿದ್ದಾರೆ.
ನಾನು 10 ವರ್ಷಗಳ ಹಿಂದೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸಂಬಳ ಪಡೆಯುವ ವೃತ್ತಿಪರ ಪತ್ರಕರ್ತನಾಗಿದ್ದೆ. ಆದರೆ ಈಗ ರಾಜಕೀಯ ಕ್ಷೇತ್ರಕ್ಕಾಗಿ ನನ್ನನ್ನೂ ನಾನು ತೋಡಗಿಸಿಕೊಂಡಿದ್ದೇನೆ. ನನ್ನಲ್ಲಿರುವ ಎಲ್ಲ ಹಣವನ್ನು ರಾಜಕೀಯ ಪ್ರಚಾರಕ್ಕೆ ಬಳಸಿದ್ದೇನೆ. ಇನ್ನು ಪ್ರಗತಿಪರ ರಾಜಕೀಯಕ್ಕಾಗಿ ನಾನು ಸಾರ್ವಜನಿಕ ದೇಣಿಗೆ ಅಭಿಯಾನವನ್ನು ಮಾಡಿದೆ, ಆದರೆ ಅದು ವಿಫಲವಾಗಿದೆ ಎಂದು ಕೆ.ಸಿ. ವೇಣುಗೋಪಾಲ್ಗೆ ಬರೆದಿರುವ ಪತ್ರದಲ್ಲಿ ಸುಚರಿತ ಮೊಹಾಂತಿ ಉಲ್ಲೇಖಿಸಿದ್ದಾರೆ.