ಕಾಂಗ್ರೆಸ್​ ಸಭೆಯಲ್ಲಿ ನಡೆದೇ ಹೋಯ್ತು ಮಾರಾಮಾರಿ.. ವಿಡಿಯೋ ವೈರಲ್​!

hassan congress meetig
Published on

ಹಾಸನ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸಮ್ಮುಖದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಕೈಕೈ ಮಿಲಾಯಿಸಿಕೊಂಡಿದ್ದು, ವಿಡಿಯೋ ವೈರಲ್​ ಆಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ನಾಯಕರಿಗೆ ಸ್ವಾಗತ ಕೋರುವ ವಿಚಾರದಲ್ಲಿ ತಿಕ್ಕಾಟ ಶುರುವಾಗಿದ್ದು, ಸಭೆಯಲ್ಲಿ ಭಾಗಿಯಾಗಿದ್ದ ನೂರಾರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಬಡಿದಾಡಿಕೊಂಡರು. ಹಿರಿಯ ಮುಖಂಡರು ಕೆಲಕಾಲ ಮೂಕ ಪ್ರೇಕ್ಷಕರಾಗಿದ್ದರು.

ಕಾಂಗ್ರೆಸ್ ಸಭೆಯಲ್ಲಿ ಸ್ವಾಗತ ಭಾಷಣ ಮಾಡುವಾಗ ಅಲ್ಪಸಂಖ್ಯಾತ ಮುಖಂಡರ ಹೆಸರು ಹೇಳಲಿಲ್ಲ ಎಂದು ಆಕ್ರೋಶಗೊಂಡ ಒಂದು ಗುಂಪು, 'ಓಟು ಹಾಕೋಕೆ ನಾವು ಬೇಕು. ನಮ್ಮ ನಾಯಕರ ಹೆಸರು ಹೇಳೋಕೆ ಮಾತ್ರ ನಿಮಗೆ ಮುಜುಗರ..' ಎಂದಿತು. ಇದಕ್ಕೆ ಪ್ರತಿಯಾಗಿ ಮತ್ತೊಂದು ಗುಂಪು ಎದ್ದು ನಿಂತಿತು. ಈ ವೇಳೆ ಎರಡೂ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡರು.

ಕಾರ್ಯಕರ್ತರ ಗಲಾಟೆ ವೇಳೆ ಅಸಹಾಯಕರಾಗಿ ಹಿರಿಯ ನಾಯಕರು ಕೂತಿದ್ದರು. ಕಡೆಗೆ ತಾವೇ ಎದ್ದು ನಿಂತು ಮಾತನಾಡಿದ ಸಲೀಂ ಅಹ್ಮದ್, 'ನಮಗೆ ಯಾವುದೇ ಜಾತಿ ಇಲ್ಲ. ನೀವೆಲ್ಲ ಹೀಗೆ ಕಿತ್ತಾಡಬೇಡಿ. ಗಲಾಟೆ ಮಾಡಿದವರ ಪಟ್ಟಿ ಕೊಡಿ. ನಾಳೆಯೇ ಅವರನ್ನು ಅಮಾನತು ಮಾಡುತ್ತೇನೆ' ಎಂದು ಎಚ್ಚರಿಸಿದರು.

ಒಟ್ಟಾರೆ ಗೊಂದಲದ ಗೂಡಾಗಿದ್ದ ಸಭೆಯಲ್ಲಿ ಕರೊನಾ ಭಯವೂ ಇಲ್ಲದಂತೆ ದೈಹಿಕ ಅಂತರ ಮರೆತದ್ದು ವಿಪರ್ಯಾಸ.

ಇದನ್ನೂ ನೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net