

Congress Worker: ನಿನ್ನೆ (ಮಾ.01) ರಾತ್ರಿ ಹರಿಯಾಣದ ರೋಹ್ಟಕ್ ಜಿಲ್ಲೆಯ ಬಸ್ ನಿಲ್ದಾಣದ ಬಳಿ ಬಿದ್ದಿದ್ದ ಸೂಟ್ಕೇಸ್ನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದ್ದು, ಘಟನೆ ನಗರದ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಕಾಂಗ್ರೆಸ್ ಪಕ್ಷದೊಂದಿಗೆ ಆಳವಾದ ನಂಟು ಹೊಂದಿದ್ದ ಯುವತಿಯನ್ನು ಯಾರೋ ಉದ್ದೇಶಪೂರ್ವಕವಾಗಿ ಕೊಲೆಗೈದು, ಮೃತದೇಹವನ್ನು ಸೂಟ್ಕೇಸ್ನಲ್ಲಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಭೀಕರ ಘಟನೆ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ.
ಕಳೆದ ವರ್ಷ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮೃತ ಹಿಮಾನಿ ನರ್ವಾಲ್ (22), ಪಕ್ಷದ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು ಎನ್ನಲಾಗಿದೆ. ಇದೀಗ ಆಕೆಯ ಸಾವಿನ ಬಗ್ಗೆ ಅನುಮಾನಗಳು ಭುಗಿಲೆದ್ದಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಆಗ್ರಹಿಸಿದ್ದಾರೆ.
ಸಂಪ್ಲಾ ಬಸ್ ನಿಲ್ದಾಣದ ಬಳಿ ದಾರಿಹೋಕರು ಸೂಟ್‌ಕೇಸ್ ಅನ್ನು ಪತ್ತೆಹಚ್ಚಿದ್ದು, ಅನುಮಾನದಿಂದ ಪೊಲೀಸರಿಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ನಗರ ಪೊಲೀಸರು, ವಿಧಿವಿಜ್ಞಾನ ತಂಡದೊಂದಿಗೆ ಸೂಟ್‌ಕೇಸ್ ಒಳಗೆ ಏನಿದೆ ಎಂಬುದನ್ನು ತೆರೆದು ನೋಡಿದ್ದಾರೆ. ಸೂಟ್ಕೇಸ್ನಲ್ಲಿ ನರ್ವಾಲ್ ರುಂಡವನ್ನು ದೇಹದಿಂದ ಬೇರ್ಪಡಿಸಿ, ಆಕೆಯ ದುಪಟ್ಟಾದಿಂದ ಸುತ್ತಿಡಲಾಗಿತ್ತು ಎಂದು ವರದಿಯಾಗಿದೆ.
ಯುವತಿಯ ಕೈಯಲ್ಲಿ ಮೆಹೆಂದಿ ಇರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೋಹ್ಟಕ್‌ನ ವಿಜಯ್ ನಗರದ ನಿವಾಸಿ ನರ್ವಾಲ್ರನ್ನು ಯಾರೋ ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ನಂತರ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಖಾಕಿ ಪಡೆ ತಿಳಿಸಿದೆ,(ಏಜೆನ್ಸೀಸ್).