

ರಾಮನಗರ: ಕರೊನಾ ಮಹಾಮಾರಿಯ ಉತ್ತುಂಗದ ಕಾಲದಲ್ಲೂ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ನಮ್ಮ ನೀರು, ನಮ್ಮ ಹಕ್ಕು’ ಪಾದಯಾತ್ರೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಕೋವಿಡ್ ಪ್ರಕರಣಗಳ ಹೆಚ್ಚಳ, ಹೈಕೋರ್ಟ್ ಮಧ್ಯಪ್ರವೇಶ, ಹೈಕಮಾಂಡ್ ಖಡಕ್ ಸೂಚನೆ ಹಾಗೂ ಹೋರಾಟವನ್ನು ತಡೆಯುವ ಸರ್ಕಾರದ ಪ್ರಯತ್ನಗಳಿಂದಾಗಿ ಪಾದಯಾತ್ರೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕಾಂಗ್ರೆಸ್ ಮುಖಂಡರು ಪ್ರಕಟಿಸಿದರು.
ಪಾದಯಾತ್ರೆ ಬುಧವಾರ ರಾಮನಗರ ಪ್ರವೇಶಿಸಿತ್ತು. ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರ ನಿಷೇಧ ಆದೇಶ ಹೊರಡಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಗುರುವಾರ ಬೆಳಗ್ಗೆ ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ ಕಾಂಗ್ರೆಸ್ ನಾಯಕರು ಪಾದಯಾತ್ರೆಗೆ ತಾತ್ಕಾಲಿಕ ವಿರಾಮದ ಘೋಷಣೆ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾದಯಾತ್ರೆ ಮುಂದುವರಿಸುವ ಇರಾದೆ ವ್ಯಕ್ತಪಡಿಸಿದರಾದರೂ ಉಳಿದ ನಾಯಕರ್ಯಾರು ಒಪ್ಪಲಿಲ್ಲ. ಕರೊನಾ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದರೆ ಸಾರ್ವಜನಿಕವಾಗಿ ನಕಾರಾತ್ಮಕ ಭಾವನೆ ಬೆಳೆಯುತ್ತದೆ. ಈಗ ಪಕ್ಷಕ್ಕೆ ಒಳ್ಳೆಯ ಹೆಸರು ಬಂದಿದೆ, ಅದನ್ನು ಕಾಪಾಡಿಕೊಳ್ಳೋಣವೆಂದು ತಿಳಿಹೇಳಿದ ನಂತರ ಅನಿವಾರ್ಯವಾಗಿ ಒಪ್ಪಿಕೊಂಡರು. ಕರೊನಾ ಸೋಂಕು ಇಳಿಮುಖವಾದ ನಂತರ ಇಲ್ಲಿಂದಲೇ ಉಳಿದ 7 ದಿನಗಳ ಪಾದಯಾತ್ರೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ನಿರ್ಧಾರಕ್ಕೆ ಕಾರಣವೇನು?
· ನ್ಯಾಯಾಲಯ ಮಧ್ಯಪ್ರವೇಶಿಸಿ ಎಚ್ಚರಿಸಿದ್ದು
· ಸರ್ಕಾರದ ಆದೇಶ ಪಾಲಿಸದಿದ್ದರೆ ಕೆಟ್ಟ ಹೆಸರು ಬರುವ ಆತಂಕ
· ಸಂಘರ್ಷಕ್ಕಿಳಿಯದೆ ಮನವೊಲಿಕೆಗೆ ಮುಂದಾದ ಸರ್ಕಾರದ ನಿಲುವು
· ಜನಾಭಿಪ್ರಾಯ ವಿರುದ್ಧವಾಗುವ ಆತಂಕ
|ಸಿದ್ದರಾಮಯ್ಯ ಸಿಎಲ್ಪಿ ನಾಯಕ
ಮೂರು ದಿನ ಮೌನದಿಂದ ಇರುತ್ತೇನೆ ಎಂದು ಹೇಳಿದ್ದೆ. ಅನಿವಾರ್ಯವಾಗಿ ಮೌನ ಮುರಿಯುತ್ತಿದ್ದೇನೆ. ಈ ಯಾತ್ರೆ ಇಲ್ಲಿಗೆ ಮುಕ್ತಾಯವಾಗಿಲ್ಲ. ಇಲ್ಲಿಂದಲೇ ಮರು ಆರಂಭವಾಗುತ್ತದೆ. ಸರ್ಕಾರ ಎಲ್ಲರಿಗೂ ಒಂದೇ ನ್ಯಾಯ ಅನುಸರಿಸುವುದೇ ಆದರೆ ಮೊದಲು ಕೋವಿಡ್ ನಿಯಮ ಉಲ್ಲಂಘಿಸಿರುವ ಬಿಜೆಪಿ ಶಾಸಕರು, ಅಧಿಕಾರಿಗಳ ಮೇಲೂ ಕೇಸ್ ಹಾಕಬೇಕು. ಈವರೆಗೂ ಪ್ರೀತಿ ಕೊಟ್ಟ ನಮ್ಮ ಜನರಿಗೆ ಅಭಾರಿ.
|ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಹೈಕಮಾಂಡ್ ಮಧ್ಯಪ್ರವೇಶ: ಪಾದಯಾತ್ರೆ ಸ್ಥಗಿತಕ್ಕೆ ಡಿಕೆಶಿ ವಿರೋಧ ವ್ಯಕ್ತಪಡಿಸಿದಾಗ ಸಭೆಯಿಂದಲೇ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೆವಾಲಾ ಅವರನ್ನು ಸಂರ್ಪಸಲಾಯಿತು. ಅವರೂ ಸಹ ಸದ್ಯಕ್ಕೆ ಸ್ಥಗಿತಗೊಳಿಸಿ ಕರೊನಾ ಅಬ್ಬರ ಕಡಿಮೆಯಾದ ನಂತರ ಪಾದಯಾತ್ರೆ ಮುಂದುವರಿಸಿ ಎಂದು ಸೂಚನೆ ನೀಡಿದ ನಂತರ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪಾದಯಾತ್ರೆಗೆ ತಾತ್ಕಾಲಿಕ ವಿರಾಮ ಹಾಕುವ ನಿರ್ಧಾರ ಪ್ರಕಟಿಸಿದರು.
ಸಭೆಯಲ್ಲಿ ದ್ವಂದ್ವ: ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಹಾಲಿ, ಮಾಜಿ ಶಾಸಕರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪಾದಯಾತ್ರೆ ಮೊಟಕುಗೊಳಿಸಿ ಈಗಾಗಲೇ ಸಿಕ್ಕಿರುವ ಜನರ ವಿಶ್ವಾಸವನ್ನು ಉಳಿಸಿಕೊಳ್ಳೋಣ ಎಂದರೆ, ಡಿ.ಕೆ. ಶಿವಕುಮಾರ್ ಪಾದಯಾತ್ರೆ ಮುಂದುವರಿಸಲೇಬೇಕು ಎಂದು ಪಟ್ಟು ಹಿಡಿದರು. ಇದರಿಂದಾಗಿ ಸಭೆಯಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವ ದ್ವಂದ್ವ ನಿರ್ವಣವಾಗಿತ್ತು. ನ್ಯಾಯಾಲಯ ಮಧ್ಯಪ್ರವೇಶ ಮಾಡಿದೆ. ಇದು ಕೇವಲ ಡಿ.ಕೆ. ಶಿವಕುಮಾರ್ ಮೇಲೆ ಬರುವುದಿಲ್ಲ. ಇಡೀ ಪಕ್ಷಕ್ಕೆ ಕೆಟ್ಟ ಹೆಸರು ಬಂದುಬಿಡುತ್ತದೆ. ಸರ್ಕಾರ ಆದೇಶ ಮಾಡಿದಾಗ ನಾವು ಗೌರವ ನೀಡಲೇಬೇಕಾಗುತ್ತದೆ. ಉಲ್ಲಂಘನೆ ಮಾಡುವುದು ಬೇರೆ ಸಂದರ್ಭದಲ್ಲಿ, ಆದರೆ ಈಗ ಕರೊನಾ ಇರುವುದರಿಂದ ಉಲ್ಲಂಘಿಸಿದರೆ ಪಕ್ಷಕ್ಕೆ ಕೆಟ್ಟ ಹೆಸರು. ಕರೊನಾ ದಿನೇದಿನೆ ಜಾಸ್ತಿಯಾಗುತ್ತಿರುವ ಸಂದರ್ಭದಲ್ಲಿ ಬೆಂಗಳೂರಿಗೆ ಇಷ್ಟು ಜನರನ್ನು ಕರೆದುಕೊಂಡು ಹೋದರೆ ನಮ್ಮ ಪರವಾಗಿರುವ ವಾತಾವರಣ ಬದಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿ ಹೇಳಿದರು ಎನ್ನಲಾಗಿದೆ. ಆದರೆ ಒಪ್ಪದ ಶಿವಕುಮಾರ್, ನಾವಿಬ್ಬರೇ ನಡೆಯೋಣ ಅಥವಾ 2 ಕಿಮೀ ಪಾದಯಾತ್ರೆ ಮಾಡಿ ಮುಗಿಸೋಣ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಸೇರಿ ಯಾರೊಬ್ಬರು ಅದನ್ನು ಒಪ್ಪಲಿಲ್ಲ. ಇಬ್ಬರೇ ನಡೆದರೂ ಜನ ಬಿಡುವರೇ ಎಂದು ಮರು ಪ್ರಶ್ನೆ ಹಾಕಿದಾಗ ಡಿಕೆಶಿ ಬಳಿ ಉತ್ತರವಿರಲಿಲ್ಲ.
ಸರ್ಕಾರಕ್ಕೆ ಹೆದರಿಲ್ಲ: ಜಂಟಿ ಸುದ್ದಿಗೋಷ್ಠಿ ನಡೆಸಿದ ಇಬ್ಬರೂ ನಾಯಕರು, ಕೋವಿಡ್ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಪಾದಯಾತ್ರೆ ಮೊಟಕುಗೊಳಿಸುತ್ತಿದ್ದೇವೆಯೇ ಹೊರತು, ಸರ್ಕಾರ ಬಂಧಿಸುವ ಭಯದಿಂದಲ್ಲ ಎಂದರು. ನಂತರ ಕಾರ್ಯಕರ್ತರಿಗೂ ಸಹ ಇದೇ ಸಂದೇಶವನ್ನು ಬಹಿರಂಗವಾಗಿ ನೀಡಿ ಪಾದಯಾತ್ರೆಗೆ ಅಂತ್ಯ ಹಾಡಿದರು.
ಎಲ್ಲೆಡೆ ಖಾಕಿ ಪಡೆ: ಹೊರ ಜಿಲ್ಲೆಗಳಿಂದ ಪಾದಯಾತ್ರೆಗೆ ಬರುವ ವಾಹನಗಳನ್ನು ತಡೆಯುವಂತೆ ಸರ್ಕಾರ ಸೂಚನೆ ನೀಡಿದ್ದ ಕಾರಣ, ಜಿಲ್ಲೆಯ ಗಡಿಯಲ್ಲಿಯೇ ವಾಹಗಳನ್ನು ತಡೆಯಲಾಗುತಿತ್ತು. ಇದರಿಂದಾಗಿ ಮಂಡ್ಯ ಜಿಲ್ಲೆಯಿಂದ ಆಗಮಿಸಬೇಕಿದ್ದ ಸುಮಾರು 10 ಸಾವಿರ ಕಾರ್ಯಕರ್ತರು ಗಡಿಯಲ್ಲಿಯೇ ಉಳಿಯುವಂತಾಯಿತು.
ಮಧ್ಯರಾತ್ರಿ ಬಂದ ನೋಟಿಸ್: ಪಾದಯಾತ್ರೆ ತಡೆಯುವ ಸಂಬಂಧ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ನಿಲ್ಲಿಸಬೇಕೆಂಬ ಜಿಲ್ಲಾಧಿಕಾರಿ ಆದೇಶವಿದ್ದ ನೋಟಿಸ್ ಅನ್ನು ಬುಧವಾರ ಮಧ್ಯರಾತ್ರಿ 12.30ರ ಸುಮಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್, ಎಸಿ ಮಂಜುನಾಥ್, ತಹಸೀಲ್ದಾರ್ ವಿಶ್ವನಾಥ್ ಕನಕಪುರದ ನಿವಾಸದಲ್ಲಿದ್ದ ಡಿಕೆಶಿ ಅವರಿಗೆ ತಲುಪಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ಗೂ ಕೋವಿಡ್ ಸೋಂಕು ಇರುವ ಕಾರಣ ಅವರ ಸಹಿಯುಳ್ಳ ಆದೇಶವನ್ನು ನಾನು ಸ್ವೀಕರಿಸುವುದಿಲ್ಲ ಎಂದು ಡಿಕೆಶಿ ನಿರಾಕರಿಸಿದರು. ಹೀಗಾಗಿ ಅವರ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಅಧಿಕಾರಿಗಳು ಹಿಂದಿರುಗಿದರು.