ರಾಜ್ಯಪಾಲರ ನಡೆಗೆ ಕಾಂಗ್ರೆಸ್​ ವಿರೋಧ

District_Cong_Protest
Published on

ತುಮಕೂರು-: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಹಾಗು ಅನುಮತಿ ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಟೌನ್​ಹಾಲ್​ ವೃತ್ತದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್​ ಟಕದ ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ಕಾಂಗ್ರೆಸ್​ ಮುಖಂಡರು ಹಾಗೂ ಕಾರ್ಯಕರ್ತರು ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯಪಾಲರ ವಿರುದ್ಧ, ಪ್ರಾಸಿಕ್ಯೂಷನ್​ಗೆ ನೀಡಿರುವ ಅನುಮತಿ ಹಿಂಪಡೆಯುವಂತೆ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರ ಗೌಡ, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ರಾಜ್ಯಪಾಲರು ವರ್ತಿಸುತ್ತಿದ್ದು ಸಿಎಂ ವಿಚಾರದಲ್ಲಿ ಅವರ ನಡೆ ಖಂಡನೀಯ. ಇದೇ ವಿಚಾರವಾಗಿ ಆ. 21 ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ನೇತೃತ್ವದಲ್ಲಿ ಸಹಕಾರ ಸಚಿವ ಕೆ.ಎನ್​.ರಾಜಣ್ಣ, ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರೊಡಗೂಡು ರಾಜ್ಯಪಾಲರ ವಿರುದ್ಧ ಬೃಹತ್​ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

2023 ರಲ್ಲಿ ಅಭೂತಪೂರ್ವ ಜನ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದು ಎರಡನೆಯ ಬಾರಿಗೆ ಸಿಎಂ ಆದ ಸಿದ್ದರಾಮಯ್ಯ ಅವರು ಕಾಂಗ್ರೆಸ್​ ಪಕ್ಷ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೆ ತಂದರು. ನುಡಿದಂತೆ ನಡೆದ ಸರ್ಕಾರದ ಜನಪರ ನಿಲುವಿನಿಂದ ಹತಾಶೆಗೊಂಡ ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳು ತಮ್ಮ ಕಾಲದಲ್ಲಿ ಆಗಿರುವ ಹಗರಣವನ್ನು ಸಿದ್ದರಾಮಯ್ಯ ತಲೆಗೆ ಕಟ್ಟಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಹುನ್ನಾರ ನಡೆಸಿವೆ ಎಂದು ಮಾಜಿ ಶಾಸಕ ಎಸ್​.ರಫೀಕ್​ ಅಹಮದ್​ ಆರೋಪಿಸಿದರು.

ಒಂದು ಸ್ಥಿರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ-&ಜೆಡಿಎಸ್​ ಪಕ್ಷಗಳು ರಾಜಕೀಯ ಅಸ್ತ್ರವಾಗಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡು ಇನ್ನಿಲ್ಲದ ಗೊಂದಲ ಸೃಷ್ಟಿಸುತ್ತಿವೆ. ಇಡೀ ಕಾಂಗ್ರೆಸ್​ ಪಕ್ಷವಲ್ಲದೆ ಸಾರ್ವಜನಿಕರು ಸಹ ಸಿದ್ದರಾಮಯ್ಯರ ಬೆನ್ನಿಗೆ ನಿಂತಿದ್ದು, ಸರ್ಕಾರವನ್ನು ಪತನಗೊಳಿಸಿ, ವಾಮಮಾರ್ಗದಿಂದ ಅಧಿಕಾರ ಹಿಡಿಯುವ ಮೈತ್ರಿ ಪಕ್ಷಗಳ ಅಟಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್​ ಅಹಮದ್​, ಮಾಜಿ ಶಾಸಕ ಎಸ್​. ಷಫಿ ಅಹಮದ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರುಗಳಾದ ಮಹೇಶ್​, ಫಯಾಜ್​, ಮಾಜಿ ಮೇಯರ್​ ಎಂ.ಪ್ರಭಾವತಿ, ಪಾಲಿಕೆ ಮಾಜಿ ಸದಸ್ಯರಾದ ಇನಾಯತ್​, ನಯಾಜ್​ , ಎನ್​. ಮಹೇಶ್​. ನಿಕೇತ ರಾಜ್​ ಮೌರ್ಯ, ಗುರುಪ್ರಸಾದ್​ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುತ್ತಿರುವ ಕಾಂಗ್ರೆಸ್​ ಪಕ್ಷದ ಚುಕ್ಕಾಣಿಯನ್ನು ಶೋಷಿತ ಸಮುದಾಯಗಳ ಜನರು ಹಿಡಿದ ಸಂದರ್ಭದಲ್ಲೇ ಇಲ್ಲಸಲ್ಲದ ಹಗರಣಗಳ ಆರೋಪ ಹೊರಿಸಿ ಇಳಿಸುವ ಕೆಲಸವನ್ನು ಪ್ರತಿಪಕ್ಷಗಳು ಮಾಡುತ್ತಾ ಬಂದಿವೆ. ಎಸ್​. ಬಂಗಾರಪ್ಪ, ವೀರಪ್ಪ ಮೊಯಿಲಿ ಸೇರಿದಂತೆ ಹಲವರು ಈ ರೀತಿಯ ಕುತಂತ್ರಕ್ಕೆ ಬಲಿಯಾಗಿದ್ದಾರೆ. ಆದರೆ, ಈ ಬಾರಿ ಕಾಂಗ್ರೆಸ್​ ಪಕ್ಷ ಸಿದ್ದರಾಮಯ್ಯ ಪರ ನಿಲ್ಲಲಿದೆ. ಎಸ್​.ರಫೀಕ್​ ಅಹ್ಮದ್​ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net