ಶ್ರೀಶೈಲಕ್ಕೆ ಬಿಹಾರ ಕಾಂಗ್ರೆಸ್​ ಶಾಸಕರ ಸ್ಥಳಾಂತರ!

bihar
Published on

ಹೈದರಾಬಾದ್: ಅನಿರೀಕ್ಷಿತ ಹಾಗೂ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಮಧ್ಯೆ ಬಿಹಾರ ರಾಜ್ಯದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿಯ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬಂದಿದೆ. ನಿತೀಶ್ ಕುಮಾರ್ ಬಿಹಾರದಲ್ಲಿ 9 ನೇ ಬಾರಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ.

ಆರ್​ಜೆಡಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಬಿಜೆಪಿ ಜೊತೆಗೆ ಸರ್ಕಾರ ರಚಿಸಿರುವ ಸಿಎಂ ನಿತೀಶ್​ಕುಮಾರ್​ ಫೆಬ್ರವರಿ 12 ರಂದು ವಿಶ್ವಾಸಮತ ಪರೀಕ್ಷೆಗೆ ಒಳಗಾಗಲಿದ್ದು, ಕಾಂಗ್ರೆಸ್​ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ತೆಲಂಗಾಣಕ್ಕೆ ಕರೆತಂದಿದೆ. ಸದ್ಯ ಅವರನ್ನು ಇಲ್ಲಿಂದ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ರೆಸಾರ್ಟ್‌ಗೆ ಮಂಗಳವಾರ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಬಿಹಾರ ವಿಧಾನಸಭೆಯಲ್ಲಿ ಮಹತ್ವದ ವಿಶ್ವಾಸ ಮತಯಾಚನೆಗೂ ಮುನ್ನ 19 ಕಾಂಗ್ರೆಸ್ ಶಾಸಕರನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಕಾಗಜ್ ಘಾಟ್ ಸಿರಿ ನೇಚರ್ ವ್ಯಾಲಿಗೆ ಕರೆತರಲಾಗಿದೆ. ಈಗ ಅಲ್ಲಿಂದ ಎಲ್ಲ ಶಾಸಕರನ್ನು ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ರೆಸಾರ್ಟ್‌ಗೆ ಮಂಗಳವಾರ ಸ್ಥಳಾಂತರಿಸಲಾಗಿದೆ. ಫೆಬ್ರವರಿ 11ರ ವರೆಗೆ ಅಲ್ಲಿಯೇ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಚ್ಚಂಪೇಟೆಯ ಕಾಂಗ್ರೆಸ್ ಶಾಸಕ ವಂಶಿಕೃಷ್ಣ ಅವರು ಬಿಹಾರದ ಶಾಸಕರಿಗೆ ದೇವರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡುತ್ತಿದ್ದಾರೆ.

ಹೈದರಾಬಾದ್​ನಿಂದ 30 ಕಿ.ಮೀ ದೂರದಲ್ಲಿರುವ ರೆಸಾರ್ಟ್‌ನಲ್ಲಿ ಎಲ್ಲರಿಗೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅದನ್ನೂ ಬದಲಿಸಿ ಶ್ರೀಶೈಲಕ್ಕೆ ಕರೆದೊಯ್ಯಲಾಗುತ್ತಿದೆ. ಯಾವ ಕಾರಣಕ್ಕಾಗಿ ಅವರನ್ನು ಸ್ಥಳಾಂತರಿಸಲಾಗುತ್ತಿದೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಪೊಲೀಸರ ಬಿಗಿ ಬಂದೋಬಸ್ತ್​ನಲ್ಲಿ ಶ್ರೀಶೈಲಕ್ಕೆ ಕರೆದೊಯ್ಯಲಾಗುತ್ತಿದೆ.

ಎಐಸಿಸಿ ಉಸ್ತುವಾರಿ ಮೋಹನ್ ಪ್ರಕಾಶ್ ಅವರು ಪಾಟ್ನಾದಿಂದ ಶಾಸಕರನ್ನು ಸ್ಥಳಾಂತರಿಸುವ ಯೋಜನೆಯನ್ನು ಮೇಲ್ವಿಚಾರಣೆ ಮಾಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಎರಡನೇ ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು. "ಅವರನ್ನು ಜನವರಿ 11 ರಂದು ಪಾಟ್ನಾಗೆ ಹಿಂದಿರುಗಲಿದ್ದಾರೆ.

ಸಿಎಂ ನಿತೀಶ್​ಗೆ ವಿಶ್ವಾಸಮತ ಪರೀಕ್ಷೆ: ಫೆಬ್ರವರಿ 12 ರಂದು ಸಿಎಂ ನಿತೀಶ್​ಕುಮಾರ್​ ಅವರು ವಿಶ್ವಾಸಮತ ಪರೀಕ್ಷೆ ಸಾಬೀತು ಮಾಡಬೇಕಿದೆ. ಆರ್​ಜೆಡಿ, ಕಾಂಗ್ರೆಸ್​ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಬಿಜೆಪಿ ಜೊತೆಗೆ ನೂತನ ಸರ್ಕಾರ ರಚಿಸಿಕೊಂಡಿದ್ದಾರೆ. ವಿಪಕ್ಷಗಳ ಇಂಡಿಯಾ ಕೂಟದಿಂದ ಹೊರಬಂದು ಎನ್​ಡಿಎ ಸೇರಿರುವ ನಿತೀಶ್​ಕುಮಾರ್​ 9ನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದು, ಬಹುಮತ ಸಾಬೀತುಪಡಿಸುವ ಸವಾಲಿದೆ.

ವಿಪಕ್ಷಗಳ ಇಂಡಿಯಾ ಕೂಟದಲ್ಲಿ ನಿರೀಕ್ಷಿತ ರೀತಿಯಲ್ಲಿ ಪ್ರಗತಿ ಆಗುತ್ತಿಲ್ಲ. ಜೊತೆಗೆ ರಾಜ್ಯದಲ್ಲಿ ಆರ್​ಜೆಡಿ ಜೊತೆಗಿನ ಮೈತ್ರಿಯನ್ನೂ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗದೇ ಕೂಟದಿಂದ ಹೊರಬರುತ್ತಿದ್ದೇನೆ. ಬಿಜೆಪಿ ಜೊತೆಗೆ ಸೇರಿ ಎನ್​ಡಿಎ ಮೈತ್ರಿಕೂಟದಲ್ಲಿ ಮುಂದುವರಿಯಲಾಗುವುದು ಎಂದು ನಿತೀಶ್​ಕುಮಾರ್​ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net