

ಜೈಪುರ/ಅಹಮದಾಬಾದ್: ಮಹತ್ವದ ರಾಜ್ಯಸಭಾ ಚುನಾವಣೆ ಹತ್ತಿರದಲ್ಲಿರುವಾಗಲೇ ಗುಜರಾತ್ನಲ್ಲಿ ರೆಸಾರ್ಟ್ ರಾಜಕೀಯ ಶುರುವಾಗಿದೆ. ಕಾಂಗ್ರೆಸ್ ಪಕ್ಷದ 65 ಶಾಸಕರು ಗುಜರಾತ್ ಮತ್ತು ರಾಜಸ್ಥಾನದ ರೆಸಾರ್ಟ್ಗಳಿಗೆ ಶಿಫ್ಟ್ ಆಗಿದ್ದಾರೆ. ಗುಜರಾತ್ನಲ್ಲಿ ಬೆನ್ನು ಬೆನ್ನಿಗೆ ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ಪಕ್ಷದ ಹೈಕಮಾಂಡ್ಗೆ ತಲೆನೋವಾಗಿತ್ತು. ಇದೇ ಕಾರಣಕ್ಕೆ ಎಲ್ಲರನ್ನು ರೆಸಾರ್ಟ್ ಶಿಫ್ಟ್ ಮಾಡಲಾಗಿದೆ ಎಂಬ ಮಾತು ವ್ಯಾಪಕವಾಗಿದೆ.
ವರದಿಗಳ ಪ್ರಕಾರ, ಜೂನ್ 19ಕ್ಕೆ ರಾಜ್ಯಸಭಾ ಸ್ಥಾನಗಳ ಚುನಾವಣೆ ನಿಗದಿಯಾಗಿರುವ ಕಾರಣ ಈ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು. 65 ಶಾಸಕರನ್ನು ರಾಜಸ್ಥಾನದ ವೈಲ್ಡ್ ವಿಂಡ್ ರೆಸಾರ್ಟ್ ಮತ್ತು ರಾಜ್ಕೋಟ್ನಲ್ಲಿರುವ ನೀಲ್ ಸಿಟಿ ರೆಸಾರ್ಟ್ ಹಾಗೂ ವಡೋದರಾದಲ್ಲಿರುವ ಅರೀಸ್ ರಿವರ್ಸೈಡ್ ಫಾರ್ಮ್ಹೌಸ್ಗೆ ಶಿಫ್ಟ್ ಮಾಡಲಾಗಿದೆ. ಈ ಪೈಕಿ 40 ಶಾಸಕರು ರಾಜಸ್ಥಾನದಲ್ಲೂ 25 ಶಾಸಕರು ಇನ್ನೆರಡು ರೆಸಾರ್ಟ್ಗಳಲ್ಲೂ ಇದ್ದಾರೆ.
ಈ ಪೈಕಿ ಒಬ್ಬ ಶಾಸಕ ಗುಲಾಬ್ ಸಿಂಗ್ ರಜಪೂತ್ ಪ್ರತಿಕ್ರಿಯಿಸಿದ್ದು, ರಾಜ್ಯಸಭಾ ಚುನಾವಣೆಯ ತಂತ್ರಗಾರಿಕೆಯ ಬಗ್ಗೆ ಚರ್ಚಿಸಲು ನಾವು ಇಲ್ಲಿ ರೆಸಾರ್ಟ್ನಲ್ಲಿ ಸೇರಿದ್ದೇವೆ. ಯಾವ ಶಾಸಕನೂ ಪಕ್ಷ ಬಿಟ್ಟು ಹೋಗಲ್ಲ. ಜನರನ್ನು ವಂಚಿಸಲು ಉದ್ದೇಶಿಸುವವರಷ್ಟೇ ಪಕ್ಷ ಬಿಟ್ಟು ಹೋಗಬಹುದಷ್ಟೆ. ಅವರಿಗೆ ಜನಾದೇಶದ ಮೇಲೆ ನಂಬಿಕೆ, ಗೌರವ ಇಲ್ಲ ಎಂದೇ ಅರ್ಥ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ: ರಾಜ್ಯಸಭಾ ಚುನಾವಣೆ ಮಹತ್ವದ್ದಾಗಿದ್ದು, ಇದಕ್ಕೂ ಮೊದಲೇ 8 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವುದಕ್ಕೆ ಬಿಜೆಪಿಯೇ ಕಾರಣ. ಅದು ಕುದುರೆ ವ್ಯಾಪಾರಕ್ಕೆ ಇಳಿದಿದೆ ಎಂದು ಶನಿವಾರವಷ್ಟೇ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಕಾಂಗ್ರೆಸ್ ಶಾಸಕರಾಗಿದ್ದ ಜಿತು ಚೌಧರಿ, ಅಕ್ಷಯರ್ ಪಟೇಲ್, ಬ್ರಿಜೇಶ್ ಮೆರ್ಜಾ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ನಾಯಕರಿಗೆ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಭಿಷೇಕ್ ಸಿಂಘ್ವಿ ಈ ಬಗ್ಗೆ ಖಾರವಾದ ಪ್ರತಿಕ್ರಿಯೆಯನ್ನೂ ಟ್ವೀಟ್ ಮಾಡಿದ್ದಾರೆ.