VIDEO| ನಮಸ್ಕರಿಸಲಿಲ್ಲವೆಂದು ಯುವಕನ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದ ಕಾಂಗ್ರೆಸ್​ ನಾಯಕನ ಮಗ

congress Assault
Published on

ರಾಂಚಿ: ತನ್ನನ್ನು ನೋಡಿ ನಮಸ್ಕಾರ ಮಾಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್​ ನಾಯಕನ ಪುತ್ರನೋರ್ವ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ದರ್ಪ ಮೆರೆದಿರುವ ಘಟನೆ ಜಾರ್ಖಂಡ್​ನ ಧನ್​​ಬಾದ್​ ಪ್ರದೇಶದಲ್ಲಿ ನಡೆದಿದೆ.

ರಾಜ್ಯ ಕಾಂಗ್ರೆಸ್​ ಘಟಕದ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡಿರುವ ರಣವಿಜಯ್​ ಸಿಂಗ್​ ಅವರ ಪುತ್ರ ರಣವೀರ್​ ಸಿಂಗ್​ ತನ್ನ ಬಾಡಿಗಾರ್ಡ್​ ಹಾಗೂ ಸ್ನೇಹಿತರ ಜೊತೆ ಸೇರಿಕೊಂಡು ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಘಟನೆ ಸಂಬಂಧ ಯುವಕನ​ ತಂದೆ ಧನ್​ಬಾದ್​ನ ಸರದಿಹೆಲಾ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಬೆದರಿಕೆ ಪ್ರಕರಣ ದಾಖಲಿಸಿದ್ಧಾರೆ.

ವೈರಲ್​ ವಿಡಿಯೋದಲ್ಲೇನಿದೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ 20-25 ಮಂದಿ ಅವಾಚ್ಯ ಶಬ್ದಗಳಿಂದ ವ್ಯಕ್ತಿಯೋರ್ವನನ್ನು ನಿಂದಿಸುತ್ತಾ ಹಲ್ಲೆ ನಡೆಸುತ್ತಿರುವುದು ಕಂಡು ಬರುತ್ತದೆ. ಈ ವೇಳೆ ಓರ್ವ ನನ್ನನ್ನು ನೋಡಿ ನೀನು ಯಾಕೆ ನಮಸ್ಕರಿಸಲಿಲ್ಲ ಎಂದು ಹೇಳುತ್ತಿರುವುದು ಕಂಡು ಬರುತ್ತದೆ.

ಗಾಯಾಳು ಯುವಕ ಆಕಾಶ್​ ಚಾಂಡೆಲ್​​ ಪ್ರತಿಕ್ರಿಯಿಸಿ, ತಾನು ಧನಬಾದ್​ನ ಕೋಯ್ಲಾ ನಗರದಲ್ಲಿರುವ ಮಾಲ್​ ಒಂದರ ಮುಂಭಾಗ ನನ್ನ ಸ್ನೇಹಿತರ ಜೊತೆ ನಿಂತಿದೆ. ಈ ವೇಳೆ 6-7 ಕಾರುಗಳಲ್ಲಿ ರಣವೀರ್​ ಸಿಂಗ್​ ಹಾಗೂ ಆತನ ಸಹಚರರು ತೆರಳುತ್ತಿದ್ದರು. ಈ ವೇಳೆ ರಸ್ತೆಬದಿ ನಿಂತಿದ್ದ ನನ್ನನ್ನು ಕಂಡು ನೀನು ಯಾಕೆ ನಮಸ್ಕಾರ ಮಾಡಲಿಲ್ಲ ಎಂದು ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಹಲ್ಲೆ ನಡೆಸಲು ಶುರು ಮಾಡಿದ್ದರು.

ನಾನು ಯಾವ ಕಾರಣಕ್ಕೆ ಹೊಡೆಯುತ್ತಿದ್ದೀರಾ ಎಂದು ಕೇಳಿದಾಗ ಅವರ ನನ್ನನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಹತ್ತಿರದಲ್ಲಿದ್ದ ಟೀ ಶಾಪ್​ ಮುಂಭಾಗ ಹಲ್ಲೆ ನಡೆಸಿದ್ದರು. ಯಾಕೆ ಹೊಡೆಯುತ್ತಿದ್ದೀರ ಎಂದು ಪುನಃ ಕೇಳಿದಾಗ ಸುಮ್ಮನೇ ಎಂದು ಹೇಳಿ ಬಲವಂತವಾಗಿ ಅವರ ಕಾಲಿಗೆ ಬೀಳುವಂತೆ ಮಾಡಿದ್ಧಾರೆ. ಬಳಿಕ ಮೊಬೈಲ್​ ಪೋನಿನಿಂದ ನನ್ನ ತಂದೆಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಯುವಕ ಆಕಾಶ್​ ಆರೋಪಿಸಿದ್ದಾನೆ.

ದೊಡ್ಡ ಷಡ್ಯಂತ್ರವಿದೆ

ವೈರಲ್​ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ರಣವಿಜಯ್​ ಸಿಂಗ್​ ನಮ್ಮ ರಾಜಕೀಯ ಬೆಳವಣಿಗೆ ಸಹಿಸಲಾರದೆ ಯಾರೋ ಕಿಡಿಗೇಡಿಗಳು ಮಾಡಿರುವ ದುಷ್ಕೃತ್ಯ ಇದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ವಿಡಿಯೋದಲ್ಲಿ ಹಲ್ಲೆ ನಡೆಸುತ್ತಿರುವವನು ನನ್ನ ಮಗ ಎಂದು ಹೇಗೆ ಹೇಳಲು ಸಾಧ್ಯ. ಈ ವಿಡಿಯೋವನ್ನು ಫೋರೆನ್ಸಿಕ್ ವಿಜ್ಞಾನಿಗಳಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೊದಲಿಗೆ ನಾನು ಈ ವಿಡಿಯೊದ ಸತ್ಯಾಸತ್ಯತೆಯನ್ನು ಪ್ರಶ್ನಿಸಲು ಇಷ್ಟಪಡುತ್ತೇನೆ. ವಿಡಿಯೋದಲ್ಲಿ ಇರುವವನು ನಿಮ್ಮ ಮಗ ಎಂದು ಹೇಳಲಾಗಿದೆ. ಆದರೆ, ಯಾವ ಕೋನದಿಂದಲೂ ನೋಡಿದರು ಸಹ ಆತ ನನ್ನ ಮಗ ಎಂದು ಹೇಳಲು ಸಾಧ್ಯವಿಲ್ಲ. ಈ ಸಂಬಂಧ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಕಾಂಗ್ರೆಸ್​ ನಾಯಕ ರಣವಿಜಯ್​ ಸಿಂಗ್​ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net