ಮುಂಬೈ: ತನ್ನ ವಿರುದ್ಧ ಪ್ರಕರಣ ದಾಖಲಿಸಿದರು ಎಂಬ ಕಾರಣಕ್ಕೆ ವ್ಯಕ್ತಿ ಓರ್ವ ತನ್ನ 13 ಮಂದಿ ಸಹಚರರೊಂದಿಗೆ ದೂರುದಾರನ ಸಹೋದರನನ್ನು ಬರ್ಬರವಾಗಿ ಇರಿದು ಕೊಲೆ ಮಾಡಿರುವ ಘಟನೆ ಮುಂಬೈನ ಚುನ್ನಭಟ್ಟಿ ಪ್ರದೇಶದ ಖುರೇಷಿ ನಗರದಲ್ಲಿ ನಡೆದಿದೆ.
ಮೃತರು ಸಾಜಿದ್ ಅಲಿ ಖುರೇಷಿ(40) ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ 10 ಮಂದಿ ತಲೆಮಾರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನಲೆ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಚುನ್ನಭಟ್ಟಿ ಪೊಲೀಸ್ ಠಾಣೆಯ ಅಧಿಕಾರಿ, ಆರೋಪಿ ವಿರುದ್ಧ ಮೃತ ಸಾಜಿದ್ ಸಹೋದರ ದೂರು ದಾಖಲಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಆರೋಪಿ ಶನಿವಾರ ತಡರಾತ್ರಿ ಖುರೇಷಿ ನಗರದ ಮುಖ್ಯರಸ್ತೆಯಲ್ಲಿ ಸಾಜಿದ್, ಅವರ ಸಹೋದರ ಹಾಗೂ ಬಾಲಕನನ್ನು ತಡೆದು ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯುವಂತೆ ಹೇಳಿದ್ದಾನೆ.
ಇದನ್ನೂ ಓದಿ: ಗದರ್-2 ಯಶಸ್ಸಿನ ಬೆನ್ನಲ್ಲೇ ದುಬಾರಿ ಸಂಭಾವನೆಗೆ ಬೇಡಿಕೆ; ಸನ್ನಿ ಡಿಯೋಲ್ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು
ಸಾಜಿದ್ ಹಾಗೂ ಆತನ ಸಹೋದರ ಇದಕ್ಕೆ ಒಪ್ಪದಿದ್ದಾಗ ಆರೋಪಿ ತನ್ನ 13 ಮಂದಿ ಸಹಚರರೊಂದಿಗೆ ಏಕಾಏಕಿ ಸಾಜಿದ್, ಆತನ ಸಹೋದರ ಹಾಗೂ ಬಾಲಕನ ಮೇಲೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸಾಜಿದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾಜಿದ್ ಸಹೋದರ ಹಾಗೂ ಬಾಲಕನ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ 10 ಮಂದಿ ತಲೆಮಾರಿಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗುವುದು ಎಂದು ಚುನ್ನಭಟ್ಟಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.