ಕೈ ನಾಯಕರ ಎತ್ತಿನ ಗಾಡಿ ಪ್ರತಿಭಟನೆ: ವಿಧಾನಸೌಧಕ್ಕೆ ಬಂಡಿಯೇರಿ ಬಂದ ಸಿದ್ದು-ಡಿಕೆಶಿ, ಬೆಲೆ ಏರಿಕೆ ವಿರುದ್ಧ ಆಕ್ರೋಶ

Congress
Published on

ಬೆಂಗಳೂರು: ಅಗತ್ಯ ವಸ್ತು ಹಾಗೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರು ಸೋಮವಾರ ವಿಧಾನಮಂಡಲ ಅಧಿವೇಶನಕ್ಕೆ ಎತ್ತಿನಗಾಡಿಗಳಲ್ಲಿ ಆಗಮಿಸಿ ಪ್ರತಿಭಟಿಸಿದರು. ವಿಧಾನಮಂಡಲ ಕಲಾಪ ಆರಂಭದ ಮೊದಲ ದಿನ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ನಿವಾಸದಿಂದಲೇ ಎತ್ತಿನಗಾಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿದ್ದು, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ ಸೇರಿ ಪಕ್ಷದ ಶಾಸಕರು ಜತೆಗಿದ್ದರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಈ ಸರ್ಕಾರ ಜನರ ಜೇಬಿಗೆ ಕೈಹಾಕಿ ದೋಚುತ್ತಿದೆ. ಕರೊನಾ ಸಂಕಷ್ಟ ಹಾಗೂ ಉದ್ಯೋಗ ಕಳೆದುಕೊಂಡು ಕಷ್ಟಪಡುತ್ತಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಈ ವಿಚಾರವಾಗಿ ಉಭಯ ಸದನಗಳಲ್ಲಿ ಕಾಂಗ್ರೆಸ್ ತೀವ್ರ ಹೋರಾಟ ನಡೆಸಲಿದೆ ಎಂದರು.

ಸಿದ್ದರಾಮಯ್ಯ ಮಾತನಾಡಿ, ಕಚ್ಛಾ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ ಎಂಬ ನೆಪ ಹೇಳಿ ಪೆಟ್ರೋಲ್, ಡೀಸೆಲ್ ದರ ಏರಿಸುತ್ತಿರುವ ಕೇಂದ್ರ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಸ್ವಲ್ಪ ಬೆಲೆ ಏರಿಕೆಯಾದಾಗ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ನಾಯಕರು ತಲೆಯ ಮೇಲೆ ಸಿಲಿಂಡರ್ ಹೊತ್ತು ಧರಣಿ ಮಾಡಿರಲಿಲ್ಲವೇ? ಜನರಿಗೆ ಅನ್ಯಾಯವಾಗಿದೆ ಎಂದು ಅವರು ಹೋರಾಟ ಮಾಡಿದ್ದರು. ಈಗವರು ಮಂತ್ರಿಯಾಗಿದ್ದಾರೆ ಎಂದು ಜನ ಬೆಲೆ ಏರಿಕೆಯನ್ನು ಸಹಿಸಿಕೊಳ್ಳಬೇಕೇ? ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್​ನವರು ಪ್ರತಿಭಟನೆ ಮಾಡಿದ್ದರೆ ಚೆನ್ನಾಗಿತ್ತು. ಬೆಲೆ ಏರಿಕೆ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದರೆ ಅಲ್ಲಿಯೇ ಉತ್ತರ ನೀಡುತ್ತೇನೆ.

| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಪೊಲೀಸರಿಗೆ ಎಚ್ಚರಿಕೆ: ಪಕ್ಷದ ಕಾರ್ಯಕರ್ತರೊಂದಿಗೆ ಎತ್ತಿನ ಬಂಡಿಯಲ್ಲಿ ವಿಧಾನಸೌಧ ಪ್ರವೇಶಿಸಲು ಮುಂದಾದ ಮುಖಂಡರನ್ನು ಪೊಲೀಸರು ತಡೆದರು. ಈ ವೇಳೆ ಸಿಟ್ಟಾದ ಸಿದ್ದರಾಮಯ್ಯ, ನಿಮ್ಮ ಮೇಲೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಬೆದರಿಕೆ ಹಾಕಿದರು. ಇಷ್ಟಾದರೂ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ, ಶಾಸಕರು, ಪರಿಷತ್ ಸದಸ್ಯರಿಗೆ ಮಾತ್ರ ಅವಕಾಶ ಮಾಡಿಕೊಡುತ್ತೇವೆಂದು ಪೊಲೀಸರು ಹೇಳಿದಾಗ, ಕೈ ಮುಖಂಡರು ಅಲ್ಲೇ ಧರಣಿ ನಡೆಸಿದರು. ಅಂತಿಮವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಎತ್ತಿನ ಗಾಡಿಯಲ್ಲಿ ವಿಧಾನಸೌಧ ಆವರಣ ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು.

ನಿಲುವಳಿ ಸೂಚನೆ ಮಂಡನೆ: ಬೆಲೆ ಏರಿಕೆ ಬಗ್ಗೆ ಸದನದಲ್ಲಿ ಚರ್ಚೆ ಮಾಡುವ ಉದ್ದೇಶದಿಂದ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ನಾನು ನಮ್ಮ ರಾಜ್ಯದ ಬಗ್ಗೆ ಕಾಳಜಿಯಿಂದ ಮಾತನಾಡುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರವನ್ನು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅದನ್ನೂ ಬಿಜೆಪಿಯವರು ಗಮನಿಸುವುದು ಒಳ್ಳೆಯದು ಎಂದರು.

ನೆಲಕ್ಕುರುಳಿದ ಶಾಸಕರು: ವಿಧಾನಸೌಧದ ಆವರಣ ಪ್ರವೇಶಿಸುವ ವೇಳೆ ಎತ್ತಿನಗಾಡಿಯಿಂದ 3-4 ಶಾಸಕರು ನೆಲಕ್ಕುರುಳಿದ ಪ್ರಸಂಗ ನಡೆಯಿತು. ಸಿದ್ದರಾಮಯ್ಯ ಇದ್ದ ಬಂಡಿಯ ಎತ್ತು ಬೆದರಿ ಎಗರಿದ ಪರಿಣಾಮ ಬಂಡಿಯಲ್ಲಿ ಹಿಂದೆ ನಿಂತಿದ್ದ ಜಿ.ಪರಮೇಶ್ವರ, ಜಿ.ಸಂಗಮೇಶ್, ಅಶೋಕ ಪಟ್ಟಣ ಮತ್ತಿತರ ನಾಯಕರು ಕೆಳಗೆ ಬಿದ್ದರು. ತಕ್ಷಣವೇ ಕಾರ್ಯಕರ್ತರು ಅವರನ್ನೆಲ್ಲ ಮೇಲೆಬ್ಬಿಸಿದರು.

ಟ್ರಾಫಿಕ್ ಜಾಮ್: ಇಬ್ಬರು ಕೈ ನಾಯಕರು ತಮ್ಮ ಮನೆಯಿಂದ ಎತ್ತಿನ ಗಾಡಿ ಮೂಲಕ ವಿಧಾನಸೌಧಕ್ಕೆ ಹೊರಟಾಗ ಅವರೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಇದ್ದರು. ಇದರಿಂದಾಗಿ ರಸ್ತೆಯ ಉದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.

ಪ್ರಧಾನಿ ಮೋದಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಯುವಕರಿಗೆ ಉದ್ಯೋಗ ಒದಗಿಸಲು ಆಗ್ರಹಿಸಿ ಸೆ.17ರಂದು ನಿರುದ್ಯೋಗ ದಿನ ಆಚರಿಸಲಾಗುವುದು. ಯುವ ಜನರ ಆಕ್ರೋಶವನ್ನು ಪ್ರಧಾನಿ ತನಕ ಮುಟ್ಟಿಸಲು ಈ ಪ್ರತಿಭಟನೆ.

| ರಕ್ಷಾ ರಾಮಯ್ಯ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಇಂಧನ ಮೇಲಿನ ತೆರಿಗೆ ಕಡಿಮೆ ಮಾಡಿದ್ದಾರೆಯೇ ಎಂಬುದನ್ನು ಗಮನಿಸಿ, ಕೈ ನಾಯಕರು ಆನಂತರ ಪ್ರತಿಭಟನೆ ಮಾಡಲಿ. ಕಾಂಗ್ರೆಸ್ ಆಡಳಿತದಲ್ಲಿದ್ದಾಗಲೂ ತೈಲ ಬೆಲೆ ಹೆಚ್ಚಾಗಿತ್ತು.

| ಶ್ರೀರಾಮುಲು ಸಾರಿಗೆ ಸಚಿವ

ಕರೊನಾ ಸಾವಿನ ಅನುಮಾನ, ಕುಟುಕಿದ ಪ್ರತಿಪಕ್ಷ: ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವಾಗ ಕರೊನಾ ಸಾವಿನ ಲೆಕ್ಕದ ಬಗ್ಗೆ ಮತ್ತೊಮ್ಮೆ ಅನುಮಾನ ಇಣುಕಿ ಹಾಕಿತು. ಇದೇ ವಿಚಾರ ಬಳಸಿಕೊಂಡು ಸರ್ಕಾರವನ್ನು ಪ್ರತಿಪಕ್ಷ ಕಾಂಗ್ರೆಸ್ ತೀಕ್ಷ್ಣವಾಗಿ ಕುಟುಕಿತು. ವಿಧಾನಸಭೆ ಅಧಿವೇಶನದ ಮೊದಲ ದಿನವೇ ಕೈಪಕ್ಷದ ನಾಯಕರು ತಮ್ಮ ನಿಲುವನ್ನು ಪರೋಕ್ಷವಾಗಿ ಬಿಂಬಿಸಿದರು. ಸರ್ಕಾರ ತೋರಿಸಿದ ಲೆಕ್ಕಕ್ಕಿಂತ 10ಪಟ್ಟು ಹೆಚ್ಚು ಜನರು ಕರೊನಾಗೆ ಬಲಿಯಾಗಿದ್ದಾರೆ ಎಂಬ ಸಂಶಯವನ್ನು ಸಿದ್ದರಾಮಯ್ಯ ಪುನರುಚ್ಚರಿಸಿದರು.

ಈಶ್ವರಪ್ಪಂದೂ ನಂದೂ ಹೇಟ್​-ಲವ್

‘ಈಶ್ವರಪ್ಪಂದೂ ನಂದೂ ಹೇಟ್ ಆಂಡ್ ಲವ್’ (ವೈರ ಮತ್ತು ಪ್ರೀತಿ) ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚಟಾಕಿ ಹಾರಿಸಿ, ಗಂಭೀರವಾಗಿದ್ದ ಸದನದಲ್ಲಿ ನಗುವಿನ ಅಲೆ ಎಬ್ಬಿಸಿದರು. ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯದ ಮೇಲೆ ಮಾತನಾಡುತ್ತಿದ್ದಾಗ, ಹಿಂಬದಿ ಸಾಲಿನ ಆಸನದಲ್ಲಿ ಕುಳಿತಿದ್ದ ರಮೇಶ್​ಕುಮಾರ್, ನೀವು (ಸಿದ್ದರಾಮಯ್ಯ) ಮೈಕ್​ಗೆ ಪೇಪರ್ ಅಡ್ಡ ಹಿಡಿದು ಮಾತನಾಡುತ್ತಿದ್ದೀರಿ, ಸರಿಯಾಗಿ ಕೇಳಿಸುವುದಿಲ್ಲ ಎಂದರು. ಅಯ್ಯೋ ಇದೇನ್ ನೀವು ಹೊಸತಾಗಿ ಹೇಳ್ತಾ ಇದ್ದೀರಲ್ಲ ಎನ್ನುತ್ತ ಸ್ಪೀಕರ್​ರತ್ತ ತಿರುಗಿ ಕೇಳಿಸ್ತಾ ಇದೆಯಲ್ಲವೇ? ಎಂದು ಕೇಳಿದರೆ, ಸ್ಪೀಕರ್ ಮೌನವಾಗಿ ತಲೆಯಾಡಿಸಿದರು. ನಿಮ್ಮ-ಅವರ (ಸ್ಪೀಕರ್) ನಡುವೆ ಏನ್ ಅಡ್ಜ್ಜೆಸ್ಟ್​ಮೆಂಟ್ ಇದೆಯೋ ನನ್ಗೊತ್ತಿಲ್ಲಪ್ಪ ಎಂದು ರಮೇಶ್​ಕುಮಾರ್ ನಗುತ್ತಾ ಹೇಳಿದರು. ‘ಅಂಥದ್ದೇನಿಲ್ಲ. ಪರಸ್ಪರ ಗೌರವ ಅಷ್ಟೇ, ಅಲ್ವೇನ್ರಿ?’ ಎಂದು ಸಿದ್ದರಾಮಯ್ಯ ಮತ್ತೊಮ್ಮೆ ಕೇಳಿದಾಗಲೂ ಸಭಾಧ್ಯಕ್ಷರು ಮೌನವಾಗಿಯೇ ತಲೆಯಾಡಿಸಿ ಸಮ್ಮತಿಸಿದರು. ಇಷ್ಟಕ್ಕೇ ರಮೇಶ್​ಕುಮಾರ್ ಸುಮ್ಮನಾಗದೆ, ಬೇಕಿದ್ದರೆ ಎದುರಿಗೆ ಕುಳಿತಿರುವ ಈಶ್ವರಪ್ಪರನ್ನು ಕೇಳಿ ಎಂದು ಅವರತ್ತ ಕೈತೋರಿಸಿದರು. ನನ್ನ ಮತ್ತು ಈಶ್ವರಪ್ಪ ಮಧ್ಯೆ ರಾಜಕೀಯವಾಗಿ ವೈರತ್ವ, ವೈಯಕ್ತಿಕವಾಗಿ ಸ್ನೇಹ-ಪ್ರೀತಿ ಇದೆ ಎಂದು ಸಿದ್ದರಾಮಯ್ಯ ಹೇಳಿದಾಗ ರಾಜಕೀಯವಾಗಿ ವೈರತ್ವ ಎಂದು ಈಶ್ವರಪ್ಪ ಪುನರುಚ್ಚರಿಸಿದರು.

ಓಲೇಕಾರ್ ಎಡವಟ್ಟು!: ನಿಧನರಾದ ಹಿರಿಯ ನಾಯಕರು, ಪ್ರಮುಖರಿಗೆ ಸಂತಾಪ ಸೂಚಿಸುವ ನಿರ್ಣಯಕ್ಕೆ ಬೆಂಬಲಿಸಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಮಾತ ನಾಡುವಾಗ, ‘ತೊಲಗಿದ ಮಹಾ ಮಹಿಮರು’ ಎನ್ನುವ ಮೂಲಕ ಎಡವಟ್ಟು ಮಾಡಿಕೊಂಡರು. ತವರು ಜಿಲ್ಲೆ ಹಾವೇರಿಯ ಹಿರಿಯ ಧುರೀಣ, ಮಾಜಿ ಸಚಿವ ಸಿ.ಎಂ.ಉದಾಸಿ ಅವರನ್ನು ಅಣ್ಣಾವು› ಎಂದೇ ಕರೆಯಲಾಗುತ್ತಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಹಲವರ ಪಾಲಿಗೆ ರಾಜಕೀಯವಾಗಿ ಮಾರ್ಗ ದರ್ಶಕರಾಗಿದ್ದರು. 6 ತಿಂಗಳಲ್ಲಿ ಉದಾಸಿ ಸೇರಿ ಹಲವು ಮಹಾ ಮಹಿ ಮಾರು ತೊಲಗಿದ್ದಾರೆ ಎಂದ ಅವರು, ಮತ್ತೊಮ್ಮೆ ಸ್ಮರಿಸುವಾಗ ಅಗಲಿದವರು ಎನ್ನುವ ಮೂಲಕ ತಿದ್ದಿಕೊಂಡರು.

ಪುರಾತತ್ವ ಇಲಾಖೆ ಕನ್ನಡ ಸಂಸ್ಕೃತಿ ಇಲಾಖೆಗೆ?

ಪ್ರವಾಸೋದ್ಯಮ ಇಲಾಖೆ ಅಧೀನದಲ್ಲಿರುವ ಪುರತಾತ್ವ ಇಲಾಖೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ತರುವ ಪ್ರಸ್ತಾವನೆಯನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಮುಖ್ಯಮಂತ್ರಿಗಳ ಜತೆ ರ್ಚಚಿಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಸಚಿವ ಸುನೀಲ್​ಕುಮಾರ್ ಮೇಲ್ಮನೆಯಲ್ಲಿ ತಿಳಿಸಿದರು. ಬಿಜೆಪಿಯ ಡಾ.ತೇಜಸ್ವಿನಿಗೌಡ ಪ್ರಶ್ನೆಗೆ ಉತ್ತರಿಸಿ, 1885ರಲ್ಲಿ ಪುರಾತತ್ವ ಇಲಾಖೆ ಅಸ್ಥಿತ್ವಕ್ಕೆ ಬಂದಿದ್ದು, ಅಂದಿನಿಂದ ಈತನಕ 9 ಸಂಪುಟಗಳಲ್ಲಿ ಎಫಿಗ್ರಫಿ ಕರ್ನಾಟಕ ಸಂಪುಟ ಹೊರತರಲಾಗಿದೆ. ಕನ್ನಡದ ಪ್ರಮುಖ ಶಾಸನಗಳನ್ನು 16 ವಸ್ತು ಸಂಗ್ರಹಾಲಯಗಳಲ್ಲಿ ಸಂರಕ್ಷಣೆ ಮಾಡುವ ಕೆಲಸ ಆಗಿದೆ ಎಂದರು. ಶಾಸನಗಳಿರುವ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಅವುಗಳನ್ನು ಸ್ಥಳದಲ್ಲಿಯೇ ಸಂರಕ್ಷಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮವಾರು ಸಮೀಕ್ಷೆ ಮಾಡಿ ಅಲ್ಲಿ ದೊರೆಯುವ ಶಾಸನಗಳ ದಾಖಲೀಕರಣ ಮಾಡಲಾಗುತ್ತಿದೆ. ಅಳಿವಿನಂಚಿನಲ್ಲಿರುವ ಕೋಟೆ ಮತ್ತು ಅರಮನೆಗಳನ್ನು ಪುನರಜ್ಜೀವನಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರಾಜ್ಯದ 22 ವಿವಿಗಳಲ್ಲಿ 6279 ವಿದ್ಯಾರ್ಥಿಗಳು ಕನ್ನಡವನ್ನು ಮುಖ್ಯ ವಿಷಯವನ್ನಾಗಿ ಮಾಡಿಕೊಂಡು ಅಧ್ಯಯನ ಮಾಡುತ್ತಿದ್ದಾರೆ. ಕನ್ನಡ ಶಾಸ್ತ್ರೀಯ ಭಾಷೆಯನ್ನು ಮಾನ್ಯತೆ ಪಡೆದ ಬಳಿಕ ಆ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸರ್ಕಾರಿ ಕಟ್ಟಡ ಮೇಲೆ ಸೋಲಾರ್

ರಾಜ್ಯದಲ್ಲಿ ಈ ವರ್ಷ ಎಲ್ಲ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಸೌರಶಕ್ತಿ ವಿದ್ಯುತ್ ಮೇಲ್ಛಾವಣಿ (ಸೋಲಾರ್ ರೂಪ್​ಟಾಪ್) ಯೋಜನೆ ಜಾರಿಗೆ ತರಲಾಗುವುದು ಎಂದು ಮೇಲ್ಮನೆಯಲ್ಲಿ ಇಂಧನ ಸಚಿವ ವಿ.ಸುನೀಲ್​ಕುಮಾರ್ ತಿಳಿಸಿದರು. ಕಾಂಗ್ರೆಸ್​ನ ಎಂ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿ, ವಿಕಾಸಸೌಧ ಮೇಲೆ 100 ಕಿ.ವ್ಯಾ. ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಸಲಾಗಿದೆ. ಎಂಎಸ್ ಬಿಲ್ಡಿಂಗ್ ಮೇಲೆಯೂ ಸೋಲಾರ್ ಅಳವಡಿಕೆಗೆ ಸಮೀಕ್ಷೆ ಮಾಡಲಾಗಿದೆ ಎಂದರು. ಜೆಡಿಎಸ್​ನ ಬಿ.ಎಂ.ಫಾರೂಕ್ ಪ್ರಶ್ನೆಗೆ ಉತ್ತರಿಸಿ, ವ್ಹೀಲಿಂಗ್ ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಮುಂದುವರಿಸಲಾಗಿದೆ. ಈ ನಿಟ್ಟಿನಲ್ಲಿ ನೀವು ನೀಡಿರುವ ಸಲಹೆಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಅಗಲಿದ ಗಣ್ಯರಿಗೆ ಉಭಯ ಸದನ ಸಂತಾಪ

ಬೆಂಗಳೂರು: ಕಳೆದ ಆರು ತಿಂಗಳಿಂದೀಚೆಗೆ ನಿಧನರಾದ ಗಣ್ಯರಿಗೆ ವಿಧಾನಸಭೆ ಹಾಗೂ ವಿಧಾನಪರಿಷತ್ ಸಂತಾಪ ಸೂಚಿಸಿತು. ಎರಡೂ ಮನೆಗಳಲ್ಲಿ ಸಂತಾಪ ನಿರ್ಣಯ ಮಂಡಿಸಿ, ನಿಧನರಾದ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ವೈದ್ಯರು, ಕಲಾವಿದರು, ಕ್ರೀಡಾಪಟುಗಳು, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲಾಯಿತು. ಸಿ.ಎಂ.ಉದಾಸಿ ಹಾಸ್ಯ ಪ್ರವೃತ್ತಿ ಬಗ್ಗೆ ಪ್ರಸ್ತಾಪಿಸಿದ ಸಿಎಂ ಬಸವರಾಜ ಬೊಮ್ಮಾಯಿ, ‘ನನ್ನ ಇನ್ಶಿಯಲ್ ಸಿ.ಎಂ., ನಾನು ಯಾವಾಗಲೂ ಮುಖ್ಯಮಂತ್ರಿಯೇ ಎನ್ನುತ್ತಿದ್ದರು’ ಎಂದು ಸ್ಮರಿಸಿದರು. ‘ನನ್ನನ್ನು ನಟಿ ಜಯಂತಿ ಯಾವಾಗರೂ ವಾಟ್ ಎ ಹೀರೋ ಎನ್ನುತ್ತಿದ್ದರು, ನಾನು ಎವರ್​ಗ್ರೀನ್ ಹೀರೋಯಿನ್’ ಎಂದು ಕರೆಯುತ್ತಿದ್ದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್, ನಟ ಸಂಚಾರಿ ವಿಜಯ್ಗೆ ಪರಿಷತ್​ನಲ್ಲಿ ಸಂತಾಪ ಸೂಚಿಸಲಾಯಿತು.

ಅಗಲಿದವರ ಸಂಖ್ಯೆ ಗರಿಷ್ಠ: ಬಜೆಟ್ ಅಧಿವೇಶನ ಮುಗಿದು ಆರು ತಿಂಗಳ ಬಳಿಕ ಮತ್ತೆ ಸೇರಿರುವ ವಿಧಾನಸಭೆ ಅಧಿವೇಶನದಲ್ಲಿ 32 ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. 2006ರಲ್ಲಿ 26 ಗಣ್ಯರಿಗೆ ಸಂತಾಪ ಸೂಚಿಸಿದ್ದೇ ಇದುವರೆಗಿನ ಗರಿಷ್ಠ ಸಂಖ್ಯೆಯಾಗಿತ್ತು.

ನನ್ನ ಮಂತ್ರಿ ಸ್ಥಾನಕ್ಕೆ ಖೇಡ್ ತಂದಿದ್ದರು!: ಹೆಗಡೆ ಸರ್ಕಾರದಲ್ಲಿ ಶಾಸಕರಾಗಿದ್ದ ಎನ್.ಎಸ್.ಖೇಡ್ ಸಂಪುಟದಲ್ಲಿದ್ದ ಕೆಲ ಸಚಿವರ ವಿರುದ್ಧ ಹೋರಾಟ ನಡೆಸಿದ್ದರು. ಅವರು ಬೇರೆಯವರ ವಿರುದ್ಧ ಹೋರಾಟ ನಡೆಸಿದ್ದರೂ ಹೆಗಡೆಯವರು ನನ್ನನ್ನೂ ಸೇರಿ 13 ಮಂದಿಯನ್ನು ಸಂಪುಟದಿಂದ ಕೈಬಿಟ್ಟರು. ಪಂಚಾಯಿತಿ ಚುನಾವಣೆ ಬಳಿಕ ಸಂಪುಟದಲ್ಲಿ ಅವಕಾಶ ಕೊಟ್ಟಿದ್ದರು. ಇವರು ಹೋರಾಟ ಮಾಡಿ ನನ್ನ ಮಂತ್ರಿ ಸ್ಥಾನವನ್ನೇ ಕಳೆದಿದ್ದರು ಎಂದು ಸಿದ್ದರಾಮಯ್ಯ ಇಂಡಿಯ ಮಾಜಿ ಶಾಸಕ ಎನ್.ಎಸ್.ಖೇಡ್​ರನ್ನು ಸ್ಮರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net