ಗುಲಾಂ ಅವರದ್ದು ಹೇಡಿತನ, ರಾಜೀನಾಮೆ ಹಿಂದಿದೆ ಯಾವುದೋ ಅಜೆಂಡಾ: ಕಾಂಗ್ರೆಸ್​ ನಾಯಕರಿಂದ ತೀವ್ರ ಟೀಕೆ..

Ghulam
Published on

ನವದೆಹಲಿ: ಕಾಂಗ್ರೆಸ್​ನ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದರಿಂದ ಪಕ್ಷ ಮುಜುಗರಕ್ಕೆ ಒಳಗಾಗಿದ್ದಷ್ಟೇ ಅಲ್ಲದೆ, ಕಾಂಗ್ರೆಸ್​ ನಾಯಕರು ಗುಲಾಂ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಗುಲಾಂ ನಬಿ ಆಜಾದ್​ ರಾಜೀನಾಮೆ ಕೊಟ್ಟಿರುವುದಕ್ಕೆ ಪ್ರತಿಕ್ರಿಯಿಸಿದ್ದು, ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ಹಿತಾಸಕ್ತಿಯಿಂದ ಬೇರೆ ಉತ್ತಮ ನಿರ್ಣಯ ಕೈಗೊಳ್ಳಬಹುದಿತ್ತು. ಆದರೆ ಅವರು ಅವರು ಇಂಥ ಪರಿಸ್ಥಿತಿಯಲ್ಲಿ ಬಿಟ್ಟುಹೋಗಿರುವುದು ಪ್ರತಿಗಾಮಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ಹೇಳಿದ್ದಾರೆ.

ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಯಾವುದೇ ಕಷ್ಟ ಇದ್ದರೂ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಜತೆಯಾಗಿ ಇದ್ದು ಪಕ್ಷವನ್ನು ಗಟ್ಟಿಗೊಳಿಸಬೇಕು. ದೇಶದ ಎಲ್ಲ ಕಷ್ಟದ ಪರಿಸ್ಥಿತಿಯಲ್ಲಿ ನಿಂತ ಕಾಂಗ್ರೆಸ್​​ಗೆ ಹಾನಿಮಾಡುವಂತೆ ನಮ್ಮ ನಿರ್ಧಾರಗಳು ಇರಬಾರದು ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ವಿಧಾನಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಸಂಕಷ್ಟದಲ್ಲಿ ಇಲ್ಲ, ಇಡೀ ದೇಶವೇ ಕವಲು ದಾರಿಯಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರುವಂತ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಆಜಾದ್ ರಾಜೀನಾಮೆ ಅವರು ಸೋಲನ್ನು ಒಪ್ಪಿಕೊಂಡಂತಾಗಿದೆ. ಇದು ಅವರಿಗೆ ಘನತೆ ತಂದು ಕೊಡುವುದಿಲ್ಲ. ರಾಷ್ಟ್ರ ಹಾಗೂ ಪಕ್ಷ ಎರಡೂ ಕಷ್ಟದಲ್ಲಿ ಇರುವಾಗ ಇವರ ನಡೆ ಹೇಡಿತನದ್ದು, ಯಾವುದೋ ಒಂದು ಅಜೆಂಡಾ ಇಟ್ಟುಕೊಂಡು ರಾಜೀನಾಮೆ ಕೊಟ್ಟಂತೆ ಕಾಣಿಸುತ್ತದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮೂಹಿಕ ನಾಯಕತ್ವದಲ್ಲಿ ಇದ್ದಂತ ಪಕ್ಷ ನಮ್ಮದು. 2014ರ ಸೋಲಿಗೆ ಕಾರಣ ಏನು ಎನ್ನುವುದಕ್ಕೆ ಗುಲಾಂ ನಬಿ ಆಜಾದ್ ಕೂಡ ಅಷ್ಟೇ ಜವಾಬ್ದಾರರು. ಕಾಂಗ್ರೆಸ್ ಆಶೀರ್ವಾದದಿಂದ 35 ವರ್ಷಗಳ ಕಾಲ ಸರ್ಕಾರದ ಆತಿಥ್ಯ ಅನುಭವಿಸಿದವರು ಅವರು. ಅಳುವ ಗಂಡಸನ್ನು ನಂಬಬಾರದು ಎನ್ನುತ್ತಾರೆ, ಈಗ ಹಾಗೇ ಅನಿಸುತ್ತಿದೆ ಎಂದು ಹರಿಪ್ರಸಾದ್ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಆಶೀರ್ವಾದದಿಂದ

ರಾಜ್ಯಸಭಾ ಸದಸ್ಯ ರಣ್​ದೀಪ್​ ಸಿಂಗ್ ಸುರ್ಜೇವಾಲ ಕೂಡ ಗುಲಾಂ ನಬಿ ಆಜಾದ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, 1980ರಿಂದ 2021ರವರೆಗೆ ನಾಲ್ಕು ತಲೆಮಾರು ಗಾಂಧಿಯರ ಹೆಸರಲ್ಲಿ ಅಧಿಕಾರ ಅನುಭವಿಸಿದ್ದಾರೆ. 24 ವರ್ಷಗಳ ಕೇಂದ್ರ ಮಂತ್ರಿ, ಜಮ್ಮು & ಕಾಶ್ಮೀರ ಸಿಎಂ, 35 ವರ್ಷ ಪ್ರಧಾ‌ನ ಕಾರ್ಯದರ್ಶಿಯಾಗಿ ಅಧಿಕಾರ ಅನುಭನಿಸಿದ್ದಾರೆ. ಆದರೆ ಅಂಥವರೇ ಕಾಂಗ್ರೆಸ್​ ವ್ಯವಸ್ಥೆ ಬಗ್ಗೆ ಕೆಟ್ಟ ರೀತಿಯಲ್ಲಿ ದೂಷಿಸುತ್ತಿದ್ದಾರೆ. ಇದು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಪಕ್ಷಕ್ಕೆ ಇವರ ಕೃತಜ್ಞತಾಭಾವ ಎಷ್ಟಿದೆ‌ ಎನ್ನುವುದನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​​ನಿಂದ ಅತ್ಯಂತ ಗೌರವದಿಂದ ನಡೆಸಿಕೊಳ್ಳಲ್ಪಟ್ಟ ವ್ಯಕ್ತಿ ತಮ್ಮ ಕೆಟ್ಟ ನಿರ್ಧಾರದಿಂದ ಪಕ್ಷಕ್ಕೆ ವಂಚಿಸಿದ್ದಾರೆ. ಇದು ಅವರ ದ್ರೋಹ ಬಗೆಯುವ ನಿಜವಾದ ಬಣ್ಣವನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net