ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ಸಚಿವ ಬುಟಾ ಸಿಂಗ್​ ವಿಧಿವಶ

Buta Singh
Published on

ನವದೆಹಲಿ: ಹಿರಿಯ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಸಚಿವ ಬುಟಾ ಸಿಂಗ್ (86)​ ಅವರು ಶನಿವಾರ ಬೆಳಗ್ಗೆ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಸಿಂಗ್​ ಅವರು ಕಳೆದ ಅಕ್ಟೋಬರ್​ನಿಂದ ಕೋಮಾದಲ್ಲಿದ್ದರು.

ಸಿಂಗ್​ ಮೃತಪಟ್ಟಿರುವುದನ್ನು ಅವರ ಮಗ ಅರ್ವಿಂದರ್​ ಸಿಂಗ್​ ಫೇಸ್​ಬುಕ್​ ಮೂಲಕ ಖಚಿತಪಡಿಸಿದ್ದಾರೆ. ನನ್ನ ತಂದೆ ಬುಟಾ ಸಿಂಗ್​ ಇಂದು ಬೆಳಗ್ಗೆ ನಿಧನರಾದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅರ್ವಿಂದರ್​ ಬರೆದುಕೊಂಡಿದ್ದಾರೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಬುಟಾ ಸಿಂಗ್​ ಜೀ ಅನುಭವವುಳ್ಳ ಆಡಳಿತಗಾರರಾಗಿದ್ದರು ಮತ್ತು ಬಡವರ ಧ್ವನಿಯಾಗಿದ್ದ ಅವರು ದಮನಿತರ ಶಕ್ತಿಯಾಗಿದ್ದರು. ಅವರ ಹಠಾತ್​ ನಿಧನದಿಂದ ದುಃಖಿತರಾಗಿದ್ದೇವೆ. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ದುಃಖಭರಿಸುವ ಶಕ್ತಿ ನೀಡಲಿ ಎಂದು ಸಂತ್ವಾನ ಹೇಳಿದ್ದಾರೆ.

ಪ್ರಧಾನಿ ಹೊರತುಪಡಿಸಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಕುಲದೀಪ್​ ಬಿಷ್ಮೋಯ್​, ಮಮತಾ ಬ್ಯಾನರ್ಜಿ, ಕೆ.ಸಿ ವೇಣುಗೋಪಾಲ್​ ಹಾಗೂ ರಾಜನಾಥ್​ ಸಿಂಗ್​ ಸೇರಿದಂತೆ ಅನೇಕ ರಾಜಕೀಯ ನಾಯಕರು ಬುಟಾ ಸಿಂಗ್​ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಆರಂಭದಲ್ಲಿ ಶಿರೋಮನಿ ಅಕಾಲಿದಳದ ಸದಸ್ಯರಾಗಿದ್ದ ಬುಟಾಸಿಂಗ್​ 1960ರಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾದರು. ಸಿಂಗ್ 1986-1989ರವರೆಗೆ ರಾಜೀವ್ ಗಾಂಧಿ ಸರ್ಕಾರದಲ್ಲಿ ಪ್ರಮುಖ ದಲಿತ ನಾಯಕ ಮತ್ತು ಕೇಂದ್ರ ಸಚಿವರಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net