

ಬೆಳಗಾವಿ: ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(CWC) ನಡೆಯುತ್ತಿದ್ದು, ಮೊದಲನೇ ದಿನವಾದ ಗುರುವಾರ (ಡಿ.26) ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ದೇಶದ ವಿವಿಧ ಕಾಂಗ್ರೆಸ್ ಘಟಾನುಘಟಿಗಳು ಭಾಗವಹಿಸುತ್ತಿದ್ದಾರೆ.
1924ರಲ್ಲಿ ಮಹಾತ್ಮಾ ಗಾಂಧೀಜಿ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನೆನಪಿಗಾಗಿ ಕಾಂಗ್ರೆಸ್ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದೀಗ ಕಾರ್ಯಕ್ರಮದಲ್ಲಿ ಹಾಕಿರುವ ಬ್ಯಾನರ್ಗಳಲ್ಲಿ ಭಾರತ ದೇಶದ ನಕ್ಷೆಯನ್ನು ಕಾಂಗ್ರೆಸ್ ಬೇಕಂತಲೇ ವಿರೂಪಗೊಳಿಸಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕಾಂಗ್ರೆಸ್ ಧಾರೆ ಎರೆದು ಕೊಟ್ಟಿದೆ ಎಂದು ಬಿಜೆಪಿ(BJP) ಕಿಡಿ ಕಾರಿದೆ.
ಈ ಕುರಿತು ಬಿಜೆಪಿ ಕರ್ನಾಟಕ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರ ಜತೆ ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ನೆಡೆಗೆ ಕೆಂಡ ಕಾರಿದ್ದಾರೆ.
ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದೇಶದ್ರೋಹ. ವೈಯುಕ್ತಿಕ ಸ್ವಾರ್ಥ ಸಾಧನೆಗಾಗಿ, ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಎಂತಹಾ ಹೀನ ಕೆಲಸಕ್ಕಾದರೂ 'ಸಿದ್ದ' ಎಂಬುದಕ್ಕೆ ಬೆಳಗಾವಿಯಲ್ಲಿ ಹಾಕಿಸಿರುವ ಬ್ಯಾನರ್‌ಗಳೇ ಸಾಕ್ಷಿ. ಸಿಎಂ ಸಿದ್ದರಾಮಯ್ಯನವರೇ ಕೂಡಲೇ ಈ ವಿವಾದಿತ ಬ್ಯಾನರ್ಗಳನ್ನು ತೆರವುಗೊಳಿಸಿ, ಭಾರತದ ನಕಾಶೆಯನ್ನು ತಿರುಚಿದ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಕರ್ನಾಟಕ ಆಗ್ರಹಿಸಿದೆ.
ದೇಶದ ಜನತೆಯ ಕಾಂಗ್ರೆಸ್ ಕ್ಷಮೆ ಕೇಳಬೇಕು: ವಿಜಯೇಂದ್ರ
ಸ್ವಾತಂತ್ರ್ಯಕ್ಕಾಗಿ ಅಸ್ತಿತ್ವಕಂಡು ಕೊಂಡಿದ್ದ ಅಂದಿನ ಕಾಂಗ್ರೆಸ್ ಅನ್ನು ರಾಜಕೀಯ ಅಧಿಕಾರಕ್ಕಾಗಿ ಅಪೋಶನ ಮಾಡಿಕೊಂಡ ಕುಟುಂಬದ ಮುಷ್ಟಿಯಲ್ಲಿರುವ ಇಂದಿನ ಕಾಂಗ್ರೆಸ್, ಇಂದು ನಡೆಸುತ್ತಿರುವ ಬೆಳಗಾವಿ ಸಮಾವೇಶದ ಶತಮಾನದ ನೆನಪು ಕೇವಲ ರಾಜಕೀಯ ಹಿತಾಸಕ್ತಿಗಾಗಿ ಎಂಬುದು ದೇಶದ ಜನತೆಗೆ ತಿಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಭಾರತದ ಕಿರೀಟ ಕಾಶ್ಮೀರಕ್ಕೆ ಕತ್ತರಿ ಪ್ರಯೋಗಿಸಿ ಮಹಾತ್ಮನನ್ನು ಸ್ಮರಿಸಲು ಹೊರಟಿರುವುದು ಮಹಾತ್ಮನ ಆತ್ಮಕ್ಕೆ ಇರಿದಂತೆ ಅಲ್ಲವೇ? ಅಖಂಡ ಭಾರತದ ಅಸ್ತಿತ್ವ ಹಾಗೂ ರಾಷ್ಟ್ರ ವಿಭಜನೆಯನ್ನು ತಡೆಯಲು ಕಡೇ ಕ್ಷಣದವರೆಗೂ ಪ್ರಯತ್ನಿಸಿದ ಗಾಂಧಿಯವರನ್ನು ಅಪಮಾನಿಸಲು ಹೊರಟಿರುವ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನದ ನೆನಪಿನ ಕಾರ್ಯಕ್ರಮ, ದೇಶಪ್ರೇಮವನ್ನು ಮೆರೆಯಲೋ, ಅಥವಾ ರಾಷ್ಟ್ರವಿದ್ರೋಹಿ ಶಕ್ತಿಗಳನ್ನು ಓಲೈಸಲೋ? ಅಥವಾ ನಿಮ್ಮ ಮಿತ್ರರಾದ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಓಲೈಕೆಗೋ ಎನ್ನುವುದನ್ನು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಭಾರತದ ಭೂಪಟಕ್ಕೆ ಅಪಚಾರವೆಸಗಿ ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರದ್ರೋಹ, ಗಾಂಧಿದ್ರೋಹ ಎರಡನ್ನು ಎಸೆಗಿರುವ ಕಾಂಗ್ರೆಸಿಗರು ಈ ಕೂಡಲೇ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.