ಅತ್ಯಾಚಾರ ಸಂತ್ರಸ್ತೆಯ ಮಗು ದತ್ತು ನೀಡಲು ಸಮ್ಮತಿ: ಉಪನೋಂದಣಾಧಿಕಾರಿ ನೀಡಿದ್ದ ಹಿಂಬರಹ ರದ್ದುಪಡಿಸಿದ ಹೈಕೋರ್ಟ್

highcourt
Published on

ಬೆಂಗಳೂರು: ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತ ಸಂತ್ರಸ್ತೆಗೆ ಜನಿಸಿದ ಮಗುವನ್ನು ದತ್ತು ನೀಡಲು ಸಮ್ಮತಿ ಸೂಚಿಸಿರುವ ಹೈಕೋರ್ಟ್, ದತ್ತು ಪತ್ರ ನೋಂದಣಿಗೆ ನಿರಾಕರಿಸಿ ಉಪನೋಂದಣಾಧಿಕಾರಿ ನೀಡಿದ್ದ ಹಿಂಬರಹ ರದ್ದುಪಡಿಸಿದೆ.

ಉಪನೋಂದಣಾಧಿಕಾರಿಯ ಹಿಂಬರಹ ರದ್ದತಿಗೆ ಕೋರಿ ಮಗುವಿನ ತಾಯಿ (ಸಂತ್ರಸ್ತೆ) ಹಾಗೂ ದತ್ತು ಪಡೆಯಲು ಬಯಸಿರುವ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮಗುವಿನ ತಾಯಿ ಮತ್ತು ದತ್ತು ಪಡೆಯಲು ಬಂದಿರುವ ದಂಪತಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಅವರಿಗೆ ಬಾಲ ನ್ಯಾಯ ಕಾಯ್ದೆ 2015ರ ನಿಯಮಗಳು ಅನ್ವಯಿಸುತ್ತವೆ.

ಅದರ ಪ್ರಕಾರ, ಮಗುವಿನ ಪಾಲಕರು ದತ್ತು ನೀಡುವ ಹಕ್ಕು ಹೊಂದಿರುತ್ತಾರೆ. ದತ್ತು ನಿಬಂಧನೆಗಳು-2017ರ ನಿಬಂಧನೆ 7(7) ಪ್ರಕಾರ ಅತ್ಯಾಚಾರದಂತಹ ಕೃತ್ಯದಿಂದ ಜನಿಸಿದ ಮಗುವನ್ನು ದತ್ತು ನೀಡಲು ತಾಯಿ ಅಧಿಕಾರ ಹೊಂದಿರುತ್ತಾರೆ. ಅದರಲ್ಲೂ ತಾಯಿ ಅಪ್ರಾಪ್ತೆಯಾಗಿದ್ದರೆ ದತ್ತು ಪತ್ರಕ್ಕೆ ಪ್ರಾಪ್ತ ಸಾಕ್ಷಿಯೊಬ್ಬರು ಸಹಿ ಹಾಕಬೇಕು ಎಂದು ತಿಳಿಸಿದೆ.

ಅಂತಿಮವಾಗಿ, ಸಂತ್ರಸ್ತೆ ಹಾಗೂ ಆಕೆಯ ತಾಯಿ ದತ್ತುಪತ್ರಕ್ಕೆ ಜಂಟಿಯಾಗಿ ಸಹಿ ಹಾಕಿದ್ದಾರೆ. ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 63 ಹೇಳುವಂತೆ ಮಗುವಿನ ಪಾಲಕರು ಹಾಗೂ ದತ್ತು ಪಡೆಯುತ್ತಿರುವ ದಂಪತಿ ನಡುವೆ ಕಾನೂನುಬದ್ಧ ದತ್ತು ಒಪ್ಪಂದ ಏರ್ಪಟ್ಟಿದೆ.

ಆದ್ದರಿಂದ ದತ್ತು ಪತ್ರಕ್ಕೆ ಅತ್ಯಾಚಾರ ಆರೋಪಿಯಾದ ಮಗುವಿನ ತಂದೆಯ ಒಪ್ಪಿಗೆ ಮುಖ್ಯವಲ್ಲ ಎಂದಿರುವ ಪೀಠ ದತ್ತು ಪತ್ರ ನೋಂದಣಿ ಮಾಡಬೇಕು ಎಂದು ಉಪನೋಂದಣಾಧಿಕಾರಿಗೆ ನಿರ್ದೇಶಿಸಿದೆ.

ನೋಂದಣಿ ನಂತರ ದತ್ತು ಪಡೆದ ದಂಪತಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ಅವರು ಪ್ರಕರಣದ ಕುರಿತ ವರದಿಯನ್ನು ಬಾಲನ್ಯಾಯ ಕಾಯ್ದೆ ಸೆಕ್ಷನ್ 66 ಹೇಳುವಂತೆ ಸೆಂಟ್ರಲ್ ಅಡಾಪ್ಶನ್ ರಿಸೋರ್ಸ್ ಅಥಾರಿಟಿಗೆ (ಸಿಎಆರ್‌ಎ) ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net