ಬಿಜೆಪಿ ಸರ್ಕಾರ ಸಿದ್ದಗಂಗಾ ಮಠಕ್ಕೆ ಬಿಡುಗಡೆ ಮಾಡಿದ್ದ ಅನುದಾನ ತಡೆಹಿಡಿದ ಕಾಂಗ್ರೆಸ್: ಹೋರಾಟದ ಎಚ್ಚರಿಕೆ ನೀಡಿದ ಬಿ.ಸುರೇಶಗೌಡ

b suresh gowda
Published on

ತುಮಕೂರು: ಆಡಳಿತಾರೂಢ ಕಾಂಗ್ರೆಸ್​ ಪಕ್ಷ ಸಿದ್ದಗಂಗಾ ಮಠದ 10 ಕೋಟಿ ರೂ. ಅನುದಾನ ಸೇರಿದಂತೆ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ 20 ಕೋಟಿ ರೂ. ಅನುದಾನವನ್ನು ತಡೆಹಿಡಿದಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಆರೋಪಿಸಿದ್ದಾರೆ.

ಈ ಕುರಿತು ಮಾತಾನಾಡಿದ್ದ ಅವರು, ಹಾಸ್ಟೆಲ್ ನಿರ್ಮಾಣಕ್ಕೆಂದು ಬಿಜೆಪಿ ಸರ್ಕಾರವು ತನ್ನ ಅವಧಿಯಲ್ಲಿ ಸಿದ್ದಗಂಗಾ ಮಠದಲ್ಲಿ ಹಾಸ್ಟೆಲ್​ ನಿರ್ಮಾಣಕ್ಕೆಂದು 10 ಕೋಟಿ ರೂ. ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದ 20 ಕೋಟಿ ರೂ.ಅನುದಾನವನ್ನು ಕಾಂಗ್ರೆಸ್​ನವರು ತಡೆಹಿಡಿದಿದ್ದಾರೆ. ಸಿದ್ದಗಂಗಾ ಮಠದ ಅನುದಾನವನ್ನು ಶಾಶ್ವತವಾಗಿ ತಡೆ ಹಿಡಿಯುವ ಧಮ್ಮು ಸರ್ಕಾರಕ್ಕೆ ಇಲ್ಲ, ಅನುದಾನ ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರ ಆಗಿದ್ದರೆ ತಡೆಹಿಡಿಯಲಿ. ಅದನ್ನು ಬಿಟ್ಟು ಅನಾವಶ್ಯಕವಾಗಿ ತಡೆಹಿಡಿಯಬಾರದು. ಆದರೂ ಮಠದ ಅನುದಾನದ ತಡೆ ತೆರವು ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಕಾಂಗ್ರೆಸ್​ನವರು ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡದೇ ಜನರಿಗೆ ಮೋಸ ಮಾಡುತಿದ್ದಾರೆ. ರಾಜ್ಯದ ಜನತೆ ಮೋಸ ಹೋಗಿದ್ದಾರೆ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್​ಗೆ ಧಮ್ ಇರಲಿಲ್ಲ. ಸುಳ್ಳು ಭರವಸೆ ಕೊಟ್ಟು ಹಿಂದಿನ ಬಾಗಿಲಿನಿಂದ ಚುನಾವಣೆವನ್ನು ಗೆದ್ದಿದ್ದಾರೆ. ಕಾಂಗ್ರೆಸ್​ನವರು ಹೇಳಿದಂತೆ ನಾನೂ ಹಾಗೂ ನಮ್ಮ ಪಕ್ಷದ ಯಾವ ಕಾರ್ಯಕರ್ತರು 200 ಯೂನಿಟ್​ವರೆಗೆ ಕರೆಂಟ್ ಬಿಲ್ ಕಟ್ಟಲ್ಲ ಎಂದರು.

ಡಿಕೆಶಿವಕುಮಾರ್​ ಮನೆ ಯಜಮಾನಿಗೆ 2 ಸಾವಿರ ರೂ. ಕೊಡುತ್ತೇನೆ ಅಂತ ಹೇಳಿದ್ದರು. ಈಗ ಆ ಹಣವನ್ನು ಸೊಸೆಗೆ ಹಾಕಬೇಕೋ ಅಥವಾ ಅತ್ತೆಗೆ ಹಾಕಬೇಕೋ ಎನ್ನುವ‌ ಗೊಂದಲ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net