

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ, ಡಿಎಂಕೆ ನಾಯಕ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆ ಇದೀಗ ಕಾಂಗ್ರೆಸ್ ಮೈತ್ರಿಕೂಟದಲ್ಲೇ ಭಿನ್ನಾಭಿಪ್ರಾಯ ಮೂಡಿಸಿರುವ ಲಕ್ಷಣಗಳು ಗೋಚರಿಸಿವೆ.
ಎನ್ಡಿಎಗೆ ವಿರುದ್ಧವಾಗಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಒಂದಾಗಿ ರಚಿಸಿಕೊಂಡಿರುವ 'ಇಂಡಿಯಾ'ದ ಪ್ರಮುಖ ಅಂಗಪಕ್ಷವಾಗಿರುವ ಡಿಎಂಕೆ ನಾಯಕನಿಂದ ಇಂಥದ್ದೊಂದು ಹೇಳಿಕೆ ಬಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್, ಎಲ್ಲ ಧರ್ಮಗಳನ್ನೂ ಗೌರವಿಸುವ ಅಗತ್ಯವಿದೆ. ತಮ್ಮ ನಿಲುವುಗಳನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದರೂ ಇನ್ನೊಬ್ಬರ ನಂಬಿಕೆಗಳನ್ನು ಗೌರವಿಸಬೇಕು ಎಂದಿದ್ದಾರೆ.
ಮತ್ತೊಂದೆಡೆ ಮಧ್ಯಪ್ರದೇಶದ ಮಾಜಿ ಸಿಎಂ, ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತ, ಸ್ಟಾಲಿನ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ. ಇನ್ನೊಬ್ಬ ಕಾಂಗ್ರೆಸ್ ನಾಯಕ ಡಾ. ಕರಣ್ ಸಿಂಗ್ ಈ ಕುರಿತು ಲಿಖಿತ ಅಭಿಪ್ರಾಯ ಪ್ರಕಟಿಸಿದ್ದು, ಈ ಹೇಳಿಕೆ ಅತ್ಯಂತ ದುರದೃಷ್ಟಕರವಾದುದು, ಇದು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಕಾಂಗ್ರೆಸ್ನ ಇನ್ನು ಕೆಲವು ನಾಯಕರು ಉದಯನಿಧಿ ಹೇಳಿಕೆ ಪರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಉದಯನಿಧಿಯ 'ಸನಾತನ' ಹೇಳಿಕೆ ಕಾಂಗ್ರೆಸ್ನಲ್ಲೇ ಭಿನ್ನಾಭಿಪ್ರಾಯ ಸೃಷ್ಟಿಯಾಗುವಂತೆ ಮಾಡಿರುವುದು ಕಂಡುಬಂದಿದೆ.